ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಪಡೆಯಲಾಗುತ್ತಿದೆ ಎನ್ನುವ ಆರೋಪದಲ್ಲಿ ನಿನ್ನೆ ಬಂಧನಕ್ಕೊಳಗಾಗಿದ್ದ ಸಚಿವ ಶ್ರೀರಾಮುಲು ಆಪ್ತ ರಾಜಣ್ಣ ಮೊದಲ ಬಾರಿ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇಂದು ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ಬಿಡುಗಡೆಯಾಗಿರುವ ರಾಜಣ್ಣ ಪ್ರಕರಣ ಬಗ್ಗೆ ತಮ್ಮ ಫೇಸ್ಬುಕ್ ನಲ್ಲಿ ವಿಸ್ತೃತವಾಗಿ ಬರೆದುಕೊಂಡಿದ್ದಾರೆ. ಸುಮಾರು 20 ವರ್ಷಗಳಿಂದ ಸಚಿವ
ಬಿ.ಶ್ರೀರಾಮುಲು ಅವರ ನೆರಳಲ್ಲಿ ಬದುಕುತ್ತಿದ್ದೇವೆ. ಸಚಿವರ ಪ್ರಾಮಾಣಿಕ ಜನಸೇವೆಯಲ್ಲಿ ನೂರಾರು ಮಂದಿ ಅಳಿಲು ಸೇವೆ ಸಲ್ಲಿಸುತ್ತಿದ್ದು, ಅವರಲ್ಲಿ ಒಬ್ಬನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಈವರೆಗೂ ಶ್ರೀರಾಮುಲು ಅವರಿಗಾಗಲಿ, ಮತ್ಯಾರಿಗೆ ಆಗಲಿ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ, ಮುಂದೆ ಮಾಡುವುದು ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ ವೈ ವಿಜಯೇಂದ್ರ ಅವರ ಕುರಿತ ಯಾವುದೇ ಆಡಿಯೋದಲ್ಲಿ ನಾನು ಭಾಗಿಯಾಗಿಲ್ಲ, ಪೊಲೀಸರು ಈ ಕುರಿತು ವಿಚಾರಣೆ ಕರೆದುಕೊಂಡು ಹೋಗಿದ್ದು, ವಿಚಾರಣೆ ವೇಳೆ ನನ್ನದು ಎನ್ನಲಾದ ಆಡಿಯೋ ಕೇಳಿಸಿದ್ದು, ಅದು ನನ್ನದಲ್ಲ ಎಂದು ನನ್ನ ಧ್ವನಿಯಿಂದ ಗೊತ್ತಾಗಿದೆ. ನನ್ನ ಕುರಿತ ಸತ್ಯಂಶ ಅವರಿಗೆ ಮನವರಿಕೆಯಾಗಿದೆ. ನನ್ನ ವಾಯ್ಸ್ ಸ್ಯಾಂಪಲ್ ಗಳನ್ನು ಪಡೆದಿದ್ದು, ಸತ್ಯಾಂಶ ಖಾತ್ರಿ ಪಡಿಸಿಕೊಳ್ಳಲು ಅವರ ಬಳಿಯಿರುವ ಆಡಿಯೋ ಜೊತೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ ಎಂದು ಪ್ರಾಥಮಿಕ ತನಿಖೆಲಿ ಮನವರಿಕೆಯಾಗಿದೆ. ಇವುಗಳನ್ನು FSLಗೂ ಕಳುಹಿಸಿಕೊಡಲಾಗಿದೆ.

ಮತ್ತೆ ಹೇಳುವೆ, ಸಚಿವರ ಸೇವೆಯಲ್ಲಿ ಪ್ರಾಮಾಣಿಕವಾಗಿ ಅಳಿಲು ಸೇವೆ ಸಲ್ಲಿಸಲು ಬಂದವರಲ್ಲಿ ನಾನು ಒಬ್ಬ, ಕಳೆದ ಒಂದು ದಿನದಿಂದ ಈಚೆಗೆ ನಡೆದ ಬೆಳವಣಿಗೆಗಳು ಹಾಗೂ ವರದಿಗಳು ಸತ್ಯಕ್ಕೆ ದೂರವಾಗಿದ್ದು, ನಾನು ಆಘಾತಕ್ಕೆ ಒಳಗಾಗಿದ್ದೇನೆ, ನನ್ನ ಕುಟುಂಬವೂ ನೋವಿನಲ್ಲಿ ಇದೆ. ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ಅವರು ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಕೆಗೂ ಮುನ್ನ ನನ್ನನು ಕರೆಯಿಸಿ ಮಾತನಾಡಿದ್ದಿದ್ದರೆ, ವಾಸ್ತವಾಂಶ ಹಾಗೂ ಸತ್ಯಾಸತ್ಯತೆ ಗೊತ್ತಾಗಿರುತ್ತಿತ್ತು.
ಈ ಪ್ರಕರಣದಲ್ಲಿ ನಾನು ಭಾಗಿಯಲ್ಲ, ಯಾವುದೇ ತಪ್ಪು ಮಾಡಿಲ್ಲ. ನಾನು ಜೀವನಕ್ಕೆ ಕಷ್ಟ ಪಟ್ಟು ದುಡಿದುಕೊಂಡು ಬದುಕುವ ವ್ಯಕ್ತಿ. ಅಡ್ಡದಾರಿ ಹಿಡಿಯುವವನಲ್ಲ ಬದುಕಿಗಾಗಿ ಕಷ್ಟಪಟ್ಟು ದುಡಿಯುತ್ತೇವೆ ಹೊರತು ಅಡ್ಡದಾರಿ ಹಿಡಿದು ಬದುಕುವವರಲ್ಲ ಎಂದು ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.