ವಿಜಯಪುರ: ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ಹಗ್ಗ-ಜಗ್ಗಾಟ ಮುಂದುವರಿದಿದೆ. ಈಗ ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಕ್ಕೆ ಸಚಿವ ಸಿ.ಪಿ.ಯೋಗೇಶ್ವರ್ ನಿಂತಿದ್ದು, ಮತ್ತೊಂದು ಸುತ್ತಿನ ಕಾದಾಟಕ್ಕೆ ಮುನ್ನಡಿ ಬರೆದಂತಾಗಿದೆ.

ವಿಜಯಪುರಕ್ಕೆ ಭೇಟಿ ನೀಡಿರುವ ಸಚಿವ ಸಿ.ಪಿ.ಯೋಗೇಶ್ವರ್ ಮಾಧ್ಯಮಗಳ ಜೊತೆ ಮಾತನಾಡಿದರು. ಈ ಭಾಗದ ಅಭಿವೃದ್ಧಿಗಾಗಿ ಯತ್ನಾಳ್ ಅವರಿಗೆ ಒಳ್ಳೆಯ ಅವಕಾಶಗಳು ಒಲಿದು ಬರಲಿವೆ ಎಂದು ಭವಿಷ್ಯ ನುಡಿದರು. ಯತ್ನಾಳ್ ಅವರಿಗೆ ಓರ್ವ ಒಳ್ಳೆಯ ಸ್ನೇಹಿತನಾಗಿ ಅವರ ಜೊತೆ ನಿಲ್ಲುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ಯತ್ನಾಳ್ ಅವರಿಗೆ ಸೂಕ್ತ ಅವಕಾಶ ನೀಡುವ ಆಶಾ ಭಾವನೆ ವ್ಯಕ್ತಪಡಿಸಿದರು.

ಕೊರೊನಾ ಹಿನ್ನೆಲೆ ವಿಜಯಪುರ ನಗರಕ್ಕೆ ಬರುವ ಮಾಹಿತಿ ಯಾರಿಗೂ ನೀಡಿರಲಿಲ್ಲ. ಹಾಗಾಗಿ ಸ್ವಾಗತಕ್ಕೆ ಯಾರೂ ಬಂದಿಲ್ಲ. ಇದರ ಹಿಂದೆ ಯಾವುದೇ ರಾಜಕೀಯ ಅಡಗಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಯೋಗೇಶ್ವರ್ ಹೈಕಮಾಂಡ್ ನಾಯಕರನ್ನ ಭೇಟಿ ಆಗಿದ್ದಾರೆ ಎಂದು ವರದಿಯಾಗಿತ್ತು. ಇತ್ತ ರಮೇಶ್ ಜಾರಕಿಹೊಳಿ ದೆಹಲಿ ತಲುಪಿದ್ದಾರೆ.