ಬಾಲಕಿಯ ಕನಸಿಗೆ ಬಣ್ಣದ ರೆಕ್ಕೆ ನೀಡಿದ ಉದ್ಯಮಿ
ರಾಂಚಿ: ರಸ್ತೆ ಬದಿ ಮಾವುಗಳನ್ನು ಮಾರುತ್ತಿದ್ದ ಬಾಲಕಿಯ ಕನಸಿಗೆ ಬಣ್ಣದ ರೆಕ್ಕೆ ಸಿಕ್ಕಿದೆ. ಹೌದು, 11 ವರ್ಷದ 5ನೇ ಕ್ಲಾಸ್ ವಿದ್ಯಾರ್ಥಿನಿ ತನ್ನ ಹಣ್ಣುಗಳಿಗೆ ಇಷ್ಟು ಹಣ ಸಿಗುತ್ತೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ.
ಜಾರ್ಖಂಡ್ ರಾಜ್ಯದ ಜಮಶೆಡ್‍ಪುರ ನಗರದ ಸ್ಟ್ರೇಟ್ ಮೈಲ್ಸ್ ರಸ್ತೆಯಲ್ಲಿರುವ ಕಟ್ಟಡದ ಔಟ್ ಹೌಸ್ ನಲ್ಲಿರುವ 11 ವರ್ಷದ ತುಳಸಿ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ತುಳಸಿ ಕುಟುಂಬ ಆರ್ಥಿಕ ಸ್ಥಿತಿ ತುಂಬಾ ಶೋಚನಿಯ ಸ್ಥಿತಿಯಲ್ಲಿದೆ. ಆದ್ರೂ ಕುಟುಂಬಸ್ಥರು ತುಳಸಿಯನ್ನ ಶಾಲೆಗೆ ಕಳುಹಿಸುತಿದ್ದರು.
ಕೊರೊನಾದಿಂದಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಹಾಗಾಗಿ ತುಳಸಿ ಮನೆಯಲ್ಲಿಯೇ ಇರುವಂತಾಗಿತ್ತು. ಆನ್‍ಲೈನ್ ನಲ್ಲಿ ಕಲಿಯಲು ತುಳಸಿ ಪೋಷಕರ ಬಳಿ ಸ್ಮಾರ್ಟ್ ಫೋನ್ ಸಹ ಇರಲಿಲ್ಲ. ಆದ್ದರಿಂದ ತುಳಸಿ ಸ್ಮಾರ್ಟ್ ಫೋನ್ ತೆಗೆದುಕೊಳ್ಳಲು ಬೇಕಾಗುವ ಹಣಕ್ಕಾಗಿ ಮಾವು ಮಾರಲು ನಿರ್ಧರಿಸಿದ್ದಳು.
ತುಳಸಿ ತಾನು ವಾಸವಿದ್ದ ಪ್ರದೇಶದಲ್ಲಿಯ ಮಾವಿನ ಮರದಿಂದ ಹಣ್ಣುಗಳನ್ನು ಪ್ರತಿನಿತ್ಯ ರಸ್ತೆ ಬದಿ ಕುಳಿತು ಮಾರಲು ಆರಂಭಿಸಿದ್ದಳು. ತುಳಸಿ ಮಾವು ಮಾರುತ್ತಿರುವಾಗ ಒಬ್ಬರ ಬಳಿ ತನ್ನ ಕತೆ ಮತ್ತು ಹಣದ ಅವಶ್ಯಕತೆಯನ್ನ ಹೇಳಿದ್ದಳು. ಆ ವ್ಯಕ್ತಿಯ ತುಳಸಿ ವಿಳಾಸ ಬರೆದು ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಕೆಲವೇ ದಿನಗಳಲ್ಲಿ ತುಳಸಿ ಫೋಟೋಗಳು ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದ್ಗರಿಂದ, ಕೆಲವರು ಬಾಲಕಿ ಬಳಿ ಬಂದ ಆಕೆ ಹೇಳಿದ ದರದಲ್ಲಿ ಮಾವುಗಳನ್ನು ಖರೀದಿಸಲು ಆರಂಭಿಸಿದರು.
ತುಳಸಿಯ ಈ ಕಥೆ ಮುಂಬೈನ ವ್ಯಾಲ್ಯೂಎಬಲ್ ಎಡ್ಯೂಟ್ಮೆಂಟ್ ಕಂಪನಿಯ ವೈಸ್ ಚೇರ್‍ಮ್ಯಾನ್ ಅಮೇಯಾವರೆಗೂ ತಲುಪಿದೆ. ತುಳಸಿ ಶಿಕ್ಷಣಕ್ಕಾಗಿ ಆಮೇಯಾ ಸಹಾಯ ಹಸ್ತ ಚಾಚಿದ್ದಾರೆ. ಹಾಗಾಗಿ ತುಳಸಿ ಬಳಿಯ 12 ಮಾವುಗಳಿಗೆ 1.20 ಲಕ್ಷ ರೂ. ನೀಡಿ ಖರೀದಿಸಿದ್ದಾರೆ.
ಸದ್ಯ ತುಳಸಿ 13 ಸಾವಿರ ರೂಪಾಯಿ ನೀಡಿ ಸ್ಮಾರ್ಟ್ ಫೋನ್ ಖರೀದಿಸಿದ್ದಾಳೆ. ಇನ್ನುಳಿದ ಹಣವನ್ನ ಆಕೆಯ ಶಿಕ್ಷಣಕ್ಕಾಗಿ ಪೋಷಕರು ಬ್ಯಾಂಕಿನಲ್ಲಿ ಇರಿಸಿದ್ದಾರೆ. ಸದ್ಯ ತುಳಸಿ ಮಾವು ಮಾರೋದನ್ನ ನಿಲ್ಲಿಸಿ, ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.