ತುಮಕೂರು: ಉಚಿತವಾಗಿ ಏನೇ ಸಿಕ್ರೂ ನಮ್ಮ ಜನ ಬಿಡಲ್ಲ. ಅವಶ್ಯಕತೆ ಇಲ್ಲದಿದ್ರೂ ಒಂದು ಹೆಚ್ಚಿಗೆ ಬರಲಿ ಬಿಡು ಅನ್ನೋ ಜಾಯಮಾನವ ಬಹುತೇಕರದ್ದು. ಇಷ್ಟು ದಿನ ಲಾಕ್‍ಡೌನ್ ಅಂತ ದಾನಿಗಳು ಊಟದ ಪ್ಯಾಕೆಟ್, ತರಕಾರಿ, ದಿನಸಿ ಕಿಟ್ ನೀಡುತ್ತಿರೋದನ್ನ ನೀವೂ ನೋಡಿರಬಹುದು. ಈಗ ಕೊತ್ತಂಬರಿ ಸೊಪ್ಪಿನ ಸರದಿ. ತುಮಕೂರಿನ ಎನ್.ಆರ್.ಕಾಲೋನಿಯಲ್ಲಿ ಉಚಿತವಾಗಿ ನೀಡುತ್ತಿದ್ದ ಕೊತ್ತಂಬರಿ ಸೊಪ್ಪಿಗೆ ಜನ ಕೊರೊನಾ ಇರೋದನ್ನ ಮರೆತು ಮುಗಿಬಿದ್ದಿದ್ದರು.

ತುಮಕೂರು ಪಾಲಿಕೆ ಸದಸ್ಯ ಶ್ರೀನಿವಾಸ್ ಉಚಿತ ಕೊತ್ತಂಬರಿ ಹಂಚಲು ಮುಂದಾಗಿದ್ದರು. ಕೊತ್ತಂಬರಿ ಹಂಚುತ್ತಿರೋ ವಿಷಯ ಸುಂಟರಗಾಳಿಯಂತೆ ಓಣಿಯಲ್ಲಿ ಹರಿದಾಡಿದೆ. ತಮಗೆ ಕೊತ್ತಂಬರಿ ಬೇಕೋ ಬೇಡ್ವಾ ಅನ್ನೋದರ ಬಗ್ಗೆ ಒಂದು ಕ್ಷಣವೂ ಯೋಚಿಸದ ಜನ ಗಾಡಿಯತ್ತ ಓಡೋಡಿ ಬಂದಿದ್ರು.

ಇನ್ನ ಜನ ಗಾಡಿ ಮೇಲೆ ಮುಗಿಬೀಳುತ್ತಿದ್ದಂತೆ ಕೊತ್ತಂಬರಿ ಸೊಪ್ಪು ಹಂಚುತ್ತಿದ್ದ ಹುಡುಗರು ಸಾಲಿನಲ್ಲಿ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಜನ ಮಾತು ಕೇಳದಿದ್ದಾಗ, ಹುಡುಗರು ಕೊತ್ತಂಬರಿ ಸೊಪ್ಪು ಎಸೆದು ಹೋಗಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.