ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲಿ ವಿವಾದದ ಕಿಡಿ ಹೊತ್ತಿಸಿದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
‘ಗುಂಪುಗಾರಿಕೆ ಮಾಡಿ ಪಕ್ಷವನ್ನು ಹಾಳು ಮಾಡುವವರು ನಮಗೆ ಬೇಡವೇ ಬೇಡ, ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡುವ, ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ನಂಬಿ ಬರುವವರನ್ನು ಮಾತ್ರ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುವುದು’ ಎನ್ನುವ ಮೂಲಕ ಸಿದ್ದರಾಮಯ್ಯ ಬಣಕ್ಕೆ ತಿವಿಯುವ ಪ್ರಯತ್ನ ಮಾಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಹಾಸನ ಜಿಲ್ಲೆ ಬೇಲೂರು ಪುರಸಭೆಗೆ ಆಯ್ಕೆ ಆಗಿರುವ ಕಾಂಗ್ರೆಸ್ ಸದಸ್ಯರನ್ನು ಅಭಿನಂದಿಸಿದ ಅವರು, ಹಾಸನ ಜಿಲ್ಲೆಯ ಅನ್ಯಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂಧರ್ಭದಲ್ಲಿ ಪಕ್ಷದೊಳಗಿನ ಎದುರಾಳಿಗಳಿಗೆ ಎಚ್ಚರಿಕೆ ರವಾನಿಸುವ ಪ್ರಯತ್ನ ಮಾಡಿದರು.
ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎನ್ನುವುದಕ್ಕೆ ಬೇಲೂರು ಪುರಸಭೆ ಫಲಿತಾಂಶವೇ ಸಾಕ್ಷಿ. ಇದನ್ನು ಕಾಂಗ್ರೆಸ್ ಪಕ್ಷದ ಎಲ್ಲರೂ ಅರಿತುಕೊಳ್ಳಬೇಕು. ಕಾಂಗ್ರೆಸ್ ಕಚೇರಿ ದೇವಾಲಯವಿದ್ದಂತೆ. ದೇವಾಲಯಕ್ಕೆ ನಾವು ಹೋಗಿ ಪೂಜೆ ಮಾಡುವುದು ಯಾಕೆ? ನಮಗೆ ನೆಮ್ಮದಿ ಸಿಗಲಿ, ಕಷ್ಟ ನಿವಾರಣೆಯಾಗಿ ಶ್ರೇಯಸ್ಸು ಸಿಗಲಿ ಅಂತಾ. ಭಕ್ತ ಹಾಗೂ ಭಗವಂತನಿಗೂ ಇರುವ ನಂಟಿನ ಸ್ಥಳ ದೇವಾಲಯ. ಯಾವುದೇ ಧರ್ಮವಾಗಿರಲಿ ದೇವರ ಮುಂದೆ ಪ್ರಾರ್ಥನೆ ಮಾಡುತ್ತೇವೆ.
ಅದೇ ಕಾರಣಕ್ಕೆ ನಾನು ದೇವಾಲಯದಂತಿರುವ ನಮ್ಮ ಕಾಂಗ್ರೆಸ್ ಕಚೇರಿಯನ್ನು ಸ್ವಲ್ಪ ಬದಲಾವಣೆ ಮಾಡಿದ್ದೇನೆ. ಹಿಂದೆ ರುದ್ರೇಶ್ ಅವರು ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ ಅವರು ಈಗ ನಮ್ಮ ಜತೆ ಇಲ್ಲ. ನಾವೇ ಹೆಣ್ಣುಮಗಳಿಗೆ ಒತ್ತಾಯ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೆವು. ಆದರೆ ಅವರು ಹೋರಾಡಿ ಸೋತಿದ್ದಾರೆ. ಅದಕ್ಕೆ ನಾವು ಸೇರಿದಂತೆ ನಾನಾ ಕಾರಣಗಳಿರಬಹುದು. ಮುಂದೆ ನಾವು ಕಾರ್ಯಕರ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಎಷ್ಟು ಜನ ನನ್ನ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸದ್ಯಕ್ಕೆ ನಾನು ಹೇಳುವುದಿಲ್ಲ. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಬಿಜೆಪಿ ಶಾಸಕರಿಗೆ ಹಾಗೂ ಮಂತ್ರಿಗಳಿಗೆ ಮನವರಿಕೆಯಾಗಿದೆ. ಈ ಸಮಯದಲ್ಲಿ ಪಕ್ಷ ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತಂದು ಜನರಿಗೆ ಅನುಕೂಲ ಮಾಡಿಕೊಡಬೇಕು.
ಜನರ ಹೃದಯ ಗೆಲ್ಲಲು ಬಿಜೆಪಿಯವರಿಗೆ ಎಂತಹ ಅವಕಾಶ ಸಿಕ್ಕಿತ್ತು. ಆದರೆ ಅವರು ಜನರ ಹೃದಯ ಗೆಲ್ಲಲಿಲ್ಲ. ಬದಲಿಗೆ ಜನರಿಗೆ ಬೂದಿ ಕೊಟ್ಟರು. ಆಸ್ಪತ್ರೆ ಬಿಲ್ ಕೊಡಲು ಶಕ್ತಿ ಇಲ್ಲದವರನ್ನು ಸ್ಮಶಾನಕ್ಕೆ ಕಳುಹಿಸಿದರು. ನಿಮ್ಮ ತಾಲೂಕಿನಲ್ಲಿ ಎಷ್ಟು ಜನ ಸತ್ತಿದ್ದಾರೆ, ಎಷ್ಟು ಜನ ಕೊರೋನಾದಿಂದ ನರಳುತ್ತಿದ್ದಾರೆ. ಎಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ, ಯಾರ ಪರಿಸ್ಥಿತಿ ಏನು ಎಂದು ನೀವು ತಂಡ ಮಾಡಿಕೊಂಡು ಮನೆ, ಮನೆಗೆ ಹೋಗಿ ವಾಸ್ತವಾಂಶ ತಿಳಿದುಕೊಂಡು ಧೈರ್ಯ ತುಂಬಬೇಕು. ಕೊರೋನಾದಿಂದ ತಮ್ಮವರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಬೇಕು. ನಾವು ಸರ್ಕಾರಕ್ಕೆ ಒತ್ತಾಯ ಮಾಡಿ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿದ್ದೇವೆ. ಜನರಿಗೆ ಆನ್ಲೈನ್ ನೋಂದಣಿ ಗೊತ್ತಿಲ್ಲ. ಹೀಗಾಗಿ ಜನರ ನೋಂದಣಿಯನ್ನು ನೀವೇ ಮಾಡಿಸಬೇಕು. ಕೋವಿಡ್ ನಿಂದ ಸತ್ತವರಿಗೂ ಪರಿಹಾರ ಸಿಗುವಂತೆ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಹೇಳಿದರು.