ತಿರುವನಂತಪುರಂ : ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಗೆ ಕೇರಳ ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ನೀಡಿದೆ.
ಐಪಿಸಿಯ ಸೆಕ್ಷನ್ 124 ಎ ಮತ್ತು 153 ಬಿ ಅಡಿಯಲ್ಲಿ ತನ್ನ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ಲಕ್ಷದ್ವೀಪ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಅಶೋಕ್ ಮೆನನ್ ಪೀಠ ಜಾಮೀನು ನೀಡಿದೆ.
ಲಕ್ಷದ್ವೀಪದ ಜನರ ವಿರುದ್ಧ ಕೇಂದ್ರ ಸರ್ಕಾರವು ಕೋವಿಡ್ 19 ಅನ್ನು ‘ಜೈವಿಕ ಆಯುಧ’ವಾಗಿ ಬಳಸಿಕೊಳ್ಳುತ್ತಿದೆ ಎಂದು ಆಯಿಷಾ ಸುಲ್ತಾನಾ ನ್ಯೂಸ್ ಚಾನೆಲ್‌ವೊಂದಕ್ಕೆ ನೀಡಿದ ಹೇಳಿಕೆ ಆಧರಿಸಿ ಲಕ್ಷದ್ವೀಪ ಸ್ಥಳೀಯ ಆಡಳಿತ ದೇಶದ್ರೋಹದ ಕೇಸ್ ದಾಖಲು ಮಾಡಿತ್ತು.
ಸದ್ಯ ಜಾಮೀನು ನೀಡಿರುವ ಕೇರಳ ಹೈಕೋರ್ಟ್, ಸಂಬಂಧಿಸಿದ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಸಹಕಾರ ನೀಡುವಂತೆ ಆಯಿಷಾ ಸುಲ್ತಾನಾಗೆ ಸೂಚನೆ ನೀಡಿದೆ.