ಡೆಹ್ರಾಡೂನ್: 28 ಬಾರಿ ಚಿನ್ನ ಗೆದ್ದಿದ್ದೇನೆ. ಆದ್ರೂ ಈ ಸ್ಥಿತಿಗೆ ಬಂದಿದ್ದೇನೆ ಎಂದು ಭಾರತದ ಮೊದಲ ಪ್ಯಾರಾಶೂಟರ್ ದಿಲ್‍ರಾಜ್ ಕೌರ್ ಕಣ್ಣೀರು ಹಾಕಿದ್ದಾರೆ. ಲಾಕ್‍ಡೌನ್ ನಿಂದಾಗಿ ಜೀವನ ನಿರ್ವಹಣೆ ಕಷ್ಟವಾದ ಹಿನ್ನೆಲೆ ದಿಲ್‍ರಾಜ್ ಕೌರ್ ರಸ್ತೆ ಬದಿ ಕುರುಕಲು ತಿಂಡಿ, ಬಿಸ್ಕಟ್ ಮಾರಾಟ ಮಾಡುತ್ತಿದ್ದಾರೆ.

ಇಲ್ಲಿಯವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಮತ್ತು ಮೂರು ಕಂಚಿನ ಪದಕ ಪಡೆದುಕೊಂಡಿದ್ದೇನೆ. ಇಷ್ಟೆಲ್ಲ ಸಾಧನೆ ಮಾಡಿದ್ರೂ ಸದ್ಯ ನನಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಬಗ್ಗೆ ಕ್ರೀಡಾ ಇಲಾಖೆಗೆ ತಿಳಿಸಿ, ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡ್ರೂ ಪ್ರಯೋಜನವಾಗಿಲ್ಲ. ಇದುವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಜೀವನಕ್ಕಾಗಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದೇನೆ. ನನ್ನ ಸ್ಥಿತಿ ಯಾರಿಗೂ ಬರವಬಾರದು ಎಂದು ದಿಲ್‍ರಾಜ್ ಕೌರ್ ಕಣ್ಣೀರು ಹಾಕುತ್ತಾರೆ.

2005ರಲ್ಲಿ ಕ್ರೀಡಾ ಜೀವನ ಆರಂಭಿಸಿದ ದಿಲ್‍ರಾಜ್ ಕೌರ್, ಕಳೆದ 15 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾಶೂಟರ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 15 ವರ್ಷಗಳಲ್ಲಿ ದೇಶಕ್ಕೆ ಒಟ್ಟು 28 ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ.