ಬೆಂಗಳೂರು : ಕಳೆದ ವರ್ಷ ಕೊರೊನಾ ಬಿಕ್ಕಟ್ಟು ಸಂದರ್ಭದಲ್ಲಿ ತಬ್ಲಿಘಿ ಜಮಾತ್ ವಿರುದ್ಧ ಸುದ್ದಿ ಮಾಡುವ ಮೂಲಕ ಸಮಾಜದಲ್ಲಿ ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿದ ನ್ಯೂಸ್ 18 ಕನ್ನಡ ವಾಹಿನಿ ಈಗ ಬಹಿರಂಗವಾಗಿ ಕ್ಷಮೆ ಕೇಳಿದೆ. ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಪ್ರೈಮ್ ನ್ಯೂಸ್‌ನಲ್ಲಿ ವಾಹಿನಿಯ ಸಂಪಾದಕರು ಕ್ಷಮೆ ಕೋರಿದ್ದಾರೆ.
ತಮ್ಮ ಬಹಿರಂಗ ಕ್ಷಮೆಯಲ್ಲಿ ಹಲವು ವಿಚಾರಗಳನ್ನು ನ್ಯೂಸ್ 18 ಕನ್ನಡ ಪ್ರಸ್ತಾಪಿಸಿದೆ. “ನಾವು ಮಾಡಿದ ವರದಿಗಳಲ್ಲಿ ವಸ್ತುನಿಷ್ಠತೆ, ಗುಣಮಟ್ಟತೆ ಮತ್ತು ತಟಸ್ಥತೆ ಕಾಪಾಡಿಕೊಳ್ಳುವುದರಲ್ಲಿ ಎಡವಿದ್ದೇವೆ. ಎರಡು ವರದಿಗಳಲ್ಲೂ ಪ್ರಸಾರ ಮಾಧ್ಯಮದ ನಿಯಮಗಳ ಉಲ್ಲಂಘನೆ ಮಾಡಿದ್ದೇವೆ. ಆದರೆ ಇದು ಉದ್ದೇಶ ಪೂರ್ವಕವಾಗಿ ಮಾಡಿದಲ್ಲ, ಕೋಮು ಸೌಹಾರ್ದತೆ ಹಾಳು ಮಾಡುವ ಅಥಾವ ನಿರ್ದಿಷ್ಟ ಧರ್ಮದ ಮೇಲೆ ದ್ವೇಷ ಭಾವನೆ ಹೆಚ್ಚಿಸುವ ಉದ್ದೇಶ ಇರಲಿಲ್ಲ ಹೀಗಾಗಿ ನಮ್ಮ ತಪ್ಪಿನಿಂದ ಪ್ರಸಾರ ವಾಗಿರುವ ಸುದ್ದಿಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ನ್ಯೂಸ್ 18 ಕನ್ನಡ ಕೊರೊನಾ ಸೋಂಕು ಹರಡುವಿಕೆಯಲ್ಲಿ ತಬ್ಲಿಘಿ ಜಮಾತ್ ಪಾತ್ರ ಇದೆ ಎನ್ನುವ ರೀತಿಯಲ್ಲಿ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು. ಸಾಕಷ್ಟು ದೂರುಗಳು ಬಳಿಕ ಈ ಬಗ್ಗೆ ಪರಿಶೀಲನೆ ನಡೆಸಿದ್ದ ರಾಷ್ಟ್ರೀಯ ಪ್ರಸಾರ ಮಾನದಂಡಗಳ ಪ್ರಾಧಿಕಾರ ಒಂದು ಲಕ್ಷ ದಂಡ ವಿಧಿಸಿತ್ತು ಜೊತೆಗೆ ಬಹಿರಂಗ ಕ್ಷಮೆ ಕೇಳಲು ಸೂಚನೆ ನೀಡಿತ್ತು. ಅದರನ್ವಯ ಇಂದು ನ್ಯೂಸ್ 18 ಕನ್ನಡ ಕ್ಷಮೆ ಕೇಳಿದೆ.