ದುಡಿಯುವ ಕೈಗಳಿಗೆ ಚೈತನ್ಯ ತುಂಬಿದ ಗ್ರಾಹಕ
ಹೈದರಾಬಾದ್: ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರೋ ಎಷ್ಟೋ ಜನರಿಗೆ ಸಹಾಯದ ಹಸ್ತ ಚಾಚಿದ್ದಾರೆ. ಸಮಾಜ ಸೇವೆಯಂತಹ ಕೆಲಸಗಳಿಗೆ ಸೋನು ಸೂದ್ ಸ್ಫೂರ್ತಿಯಾಗಿದ್ದಾರೆ. ಹೈದರಾಬಾದ್ ಓರ್ವ ವ್ಯಕ್ತಿ ಝೊಮ್ಯಾಟೋ ಬಾಯ್‍ಗೆ 73 ಸಾವಿರ ರೂ. ಬೆಲೆ ಬಾಳುವ ಗಿಫ್ಟ್ ನೀಡಿ ದುಡಿಯುವ ಕೈಗಳಿಗೆಬ ಚೈತನ್ಯ ತುಂಬಿದ್ದಾರೆ.

ಹೈದರಾಬಾದ್ ಕೋಟಿ ಕ್ಷೇತ್ರದ ನಿವಾಸಿ ರಾಬಿನ್ ಮುಖೇಶ್ ಐಟಿ ವಲಯದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ವರ್ಕ್ ಫ್ರಂ ಹೋಮ್ ಇರೋದರಿಂದ ಬೆಳಗ್ಗೆ 10 ಗಂಟೆಗೆ ಝೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದರು. ಈ ಸಮಯದಲ್ಲಿ ನಗರದಲ್ಲಿ ಜೋರು ಮಳೆಯಾಗುತ್ತಿತ್ತು.

ನನ್ನ ಆಫಿಸ್ ಟೈಮ್ ಆರಂಭವಾಗಿತ್ತು. ಮಳೆ ಬರುತ್ತಿದ್ದರಿಂದ ಝೊಮ್ಯಾಟೋದಲ್ಲಿ ಒಂದು ಕಪ್ ಚಹ ಆರ್ಡರ್ ಮಾಡಿದ್ದೆ. ಅಷ್ಟು ಜೋರು ಮಳೆ ಆಗುತ್ತಿದ್ರೂ ಆರ್ಡರ್ ಮಾಡಿದ 15 ನಿಮಿಷದಲ್ಲಿ ಝೊಮ್ಯಾಟೋ ಬಾಯ್ ಮೊಹಮ್ಮದ್ ಅಕಿಲ್ ನಿಂದ ಕರೆ ಬಂತು.

ಕರೆ ಮಾಡಿದ ಅಕಿಲ್, ಆರ್ಡರ್ ತೆಗೆದುಕೊಂಡು ಹೋಗಲು ನನ್ನನ್ನು ಅಪಾರ್ಟ್ ಮೆಂಟ್ ನಿಂದ ಕೆಳಗೆ ಬರುವಂತೆ ಕರೆದ. ಮಳೆಯಿಂದಾಗಿ ಅಕಿಲ್ ಬಟ್ಟೆ ಪೂರ್ಣ ಒದ್ದೆಯಾಗಿತ್ತು. ಆದ್ರೆ ಅವನು ಸೈಕಲ್ ನಲ್ಲಿ ಬಂದಿರೋದನ್ನು ಕಂಡು ಶಾಕ್ ಆಯ್ತು. ಮಳೆಯಲ್ಲಿ ಅಷ್ಟು ದೂರದಿಂದ ಅದು 15 ನಿಮಿಷದಲ್ಲಿಯೇ ಆರ್ಡರ್ ತಲುಪಿಸಿರೋದು ಆತನ ಶ್ರದ್ಧೆಗೆ ಮೂಕವಿಸ್ಮಿತನಾದೆ ಎಂದು ಮುಖೇಶ್ ಹೇಳಿದ್ದಾರೆ.

ಈ ವೇಳೆ ಆತನ ಬಗ್ಗೆ ಕೇಳಿದಾಗ, ಕಳೆದ ಒ0ದು ವರ್ಷದಿಂದ ಸೈಕಲ್ ಮೂಲಕವೇ ಆರ್ಡರ್ ಡೆಲಿವರಿ ಮಾಡುತ್ತಿರೋದಾಗಿ ಅಕಿಲ್ ಹೇಳಿದ. ಅವನ ಕೆಲಸಕ್ಕೆ ಪ್ರಭಾವಿತನಾಗಿ ಸಹಾಯಕ್ಕೆ ಮುಂದಾದೆ. ಆತನ ಅನುಮತಿ ಪಡೆದು ಅಕಿಲ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡೆ. ಇನ್ನು ಅಕಿಲ್ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿ ಅನ್ನೋ ವಿಷಯ ತಿಳಿಯಿತು.

ಅಕಿಲ್ ಜೊತೆಗಿನ ಸೆಲ್ಫಿಯನ್ನು ಫುಡ್ ಆಂಡ್ ಟ್ರಾವೆಲ್ ಹೆಸರಿನ ಫೇಸ್‍ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿ, ಆತನ ಬಗ್ಗೆ ಒಂದೆರಡು ಸಾಲು ಬರೆದುಕೊಂಡೆ. ಈ ಪೋಸ್ಟ್ ಕೆಲವೇ ಗಂಟೆಯಲ್ಲಿ ವೈರಲ್ ಆಯ್ತು. ಜನರಿಂದ ಅನೇಕ ಮೆಸೇಜ್ ಗಳು ಬಂದವು. ಹಲವರು ದುಡಿಯುತ್ತಿರುವ ವಿದ್ಯಾರ್ಥಿಗೆ ಬೈಕ್ ಸಿಕ್ರೆ ಆತನಿಗೆ ಸಹಾಯ ಮಾಡಿದಂತೆ ಆಗುತ್ತೆ ಎಂದು ಹಲವರು ಕಮೆಂಟ್ ಮಾಡಿದ್ರು.

ಅಕಿಲ್ ತಂದೆ ಚಪ್ಪಲಿ ತಯಾರಿಸುವ ಕೆಲಸ ಮಾಡುತ್ತಾರೆ. ಆದ್ರೆ ಕೊರೊನಾದಿಂದ ಆ ಕೆಲಸವೂ ನಿಂತಿದೆ. ಹಾಗಾಗಿ ಇಡೀ ಸಂಸಾರದ ಜವಾಬ್ದಾರಿ 21 ವರ್ಷದ ಅಕಿಲ್ ಹೆಗಲ ಮೇಲಿದೆ. ಹಾಗಾಗಿ ವಾತಾವರಣ ಹೇಗೇ ಇರಲಿ, ತನ್ನ ಸೈಕಲ್ ಮೇಲೆಯೇ ಫುಡ್ ಡೆಲಿವರಿ ಮಾಡೋಕೆ ಮುಂದಾದ. ಅಕಿಲ್ ಪ್ರತಿ ದಿನ ಸುಮಾರು 80 ಕಿಲೋ ಮೀಟರ್ ಸಂಚರಿಸಿ ಫುಡ್ ಡೆಲವರಿ ಮಾಡ್ತಾನೆ.

ಅಕಿಲ್ ಹಿನ್ನೆಲೆ ತಿಳಿದ ನಾನು ಆತನಿಗೆ ಬೈಕ್ ಕೊಡಿಸಲು ಹಣ ಸಂಗ್ರಹಕ್ಕೆ ಮುಂದಾದೆ. ನೋಡ ನೋಡುತ್ತಿದ್ದಂತೆ 73 ಸಾವಿರ ರೂ. ಜಮಾ ಆಯ್ತು. ಅಮೆರಿಕ ಮಹಿಳೆಯೊಬ್ಬರು ಬರೋಬ್ಬರಿ 30 ಸಾವಿರ ರೂ. ನೀಡಿದರು. ನನ್ನ ಪೋಸ್ಟ್ ವೈರಲ್ ಆಗಿ ಹೆಚ್ಚು ಹಣ ಬರಲು ಆರಂಭವಾಗಿದ್ದರಿಂದ ಅದನ್ನು ಡಿಲೀಟ್ ಮಾಡಿದೆ. ಅಕಿಲ್ ಗೆ ಬೇಕಾಗಿದ್ದ 73 ಸಾವಿರ ಸಿಕ್ಕಿತು. ಕೊನೆಗೆ ಶೋರೂಂಗೆ ಕರೆದುಕೊಂಡು ಹೋಗಿ ಅಕಿಲ್ ಗೆ ಬೈಕ್, ಸ್ಯಾನಿಟೈಸರ್, ಹೆಲ್ಮೆಟ್ ಕೊಡಿಸಲಾಯ್ತು, ಇದೇ ಹಣದಲ್ಲಿ ಅಕಿಲ್ ಕಾಲೇಜಿನ 5 ಸಾವಿರ ಶುಲ್ಕ ಪಾವತಿಸಲಾಯ್ತು ಎಂದು ಮುಖೇಶ್ ಭಾವುಕರಾದರು.