ನವದೆಹಲಿ : ನೇರ, ನಿಷ್ಠುರ, ನಿರ್ಮಿತ ಪತ್ರಿಕೋದ್ಯಮ ನಡೆಸುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕನ್ನಡದ ಎರಡು ಪ್ರಮುಖ ನ್ಯೂಸ್ ಚಾನಲ್‌ಗಳಾದ ಏಷ್ಯಾನೇಟ್ ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡ ವಾಹಿನಿಗಳಿಗೆ ಪತ್ರಿಕೋದ್ಯಮ ನೀತಿ ಮತ್ತು ತತ್ವಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ.
ರಾಷ್ಟ್ರೀಯ ಪ್ರಸಾರ ಮಾನದಂಡಗಳ ಪ್ರಾಧಿಕಾರ (ಎನ್‌ಬಿಎಸ್‌ಎ) ಈ ವಾಹಿನಿಗಳಿಗೆ ಪತ್ರಿಕೋದ್ಯಮ ನೀತಿ ಮತ್ತು ತತ್ವಗಳನ್ನು ಉಲ್ಲಂಘಿಸಿದ್ದಕ್ಕಾಗಿ ಛೀಮಾರಿ ಹಾಕಿ, ದಂಡ ವಿಧಿಸಿದೆ. ‘ನ್ಯೂಸ್ 18 ಕನ್ನಡ ಒಂದು ಲಕ್ಷ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ 50 ಸಾವಿರ ರೂಪಾಯಿ’ ದಂಡ ಭರಿಸುವಂತೆ ಜೂನ್ 16 ರಂದು ಅದು ಸೂಚಿಸಿದೆ.

2020 ರಲ್ಲಿ ಕೊರೊನಾ ಸೋಂಕು ಹರಡುವಿಕೆ ವಿಚಾರದಲ್ಲಿ ಕನ್ನಡದ ಈ ಎರಡು ವಾಹಿನಿಗಳು ಸೇರಿ ಆಂಗ್ಲ ಮಾಧ್ಯಮ ಟೈಮ್ಸ್ ನೌ ಕೂಡಾ ದ್ವೇಷ ಭಾಷಣ ಮಾಡಿದ್ದವು. ತಬ್ಲಿಘ್ ಜಮಾತ್ ಹೆಸರಿನಲ್ಲಿ ಒಂದು ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ನಿಂಧಿಸಲಾಗಿದೆ. ತಬ್ಲಿಘಿ ಜಮಾತ್ ವಿರುದ್ಧ ಸುದ್ದಿ ಮಾಡುವ ಭರದಲ್ಲಿ ಇಡೀ ಮುಸ್ಲಿಂ ಸಮುದಾಯದವನ್ನು ಅವಮಾನಿಸಲಾಗಿದೆ ಎಂದು ಎನ್‌ಬಿಎಸ್‌ಎ ಹೇಳಿದೆ.

ಸುದ್ದಿವಾಹಿನಿಗಳ ಈ ವರ್ತನೆ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು, ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಿದ ರಾಷ್ಟ್ರೀಯ ಪ್ರಸಾರ ಮಾನದಂಡಗಳ ಪ್ರಾಧಿಕಾರ (ಎನ್‌ಬಿಎಸ್‌ಎ) ನಿಮಯಗಳ ಉಲ್ಲಂಘನೆ ಹಿನ್ನಲೆ ದಂಡ ವಿಧಿಸಿದೆ.
ರಾಷ್ಟ್ರೀಯ ಪ್ರಸಾರ ಮಾನದಂಡಗಳ ಪ್ರಾಧಿಕಾರ (ಎನ್‌ಬಿಎಸ್‌ಎ) ಆದೇಶದ ಪ್ರಕಾರ, ಈ ಆದೇಶದ ಒಂದು ವಾರದೊಳಗೆ ನಿಗಧಿತ ದಂಡದ ಹಣವನ್ನು ‘ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್’ಗೆ (ಎನ್‌ಬಿಎ) ಪಾವತಿಸಬೇಕು. ಅಲ್ಲದೇ ಈ ಮೂರು ವಾಹಿನಿಗಳು ಜೂನ್ 23 ರ ಮುಂಚಿತವಾಗಿ ಯಾವುದಾದರೂ ಒಂದು ದಿನ ರಾತ್ರಿ 9 ಗಂಟೆ ಪ್ರೈಮ್ ಟೈಮ್ ನ್ಯೂಸ್ ಸಮಯದಲ್ಲಿ ಬಹಿರಂಗವಾಗಿ ಅಕ್ಷರ ಮತ್ತು ಧ್ವನಿ ಎರಡು ರೂಪದಲ್ಲಿ ಕ್ಷಮೆ ಕೇಳಬೇಕು ಎಂದು ಹೇಳಿದೆ.

ಇದರ ಜೊತೆಗೆ ಈ ಚಾನೆಲ್‌ಗಳು ತನ್ನ ವೆಬ್‌ಸೈಟ್, ಯೂಟ್ಯೂಬ್ ಮತ್ತು ಇತರ ಲಿಂಕ್‌ಗಳಿಂದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಪ್ರಸಾರವಾದ ಎಲ್ಲ ವೀಡಿಯೊಗಳನ್ನು ಮತ್ತು ಸುದ್ದಿಗಳ ತುಣುಕುಗಳನ್ನು ತೆಗೆದುಹಾಕುವಂತೆ ಎನ್‌ಬಿಎಸ್‌ಎ ಸೂಚಿಸಿದೆ, ಅಲ್ಲದೇ ಏಳು ದಿನಗಳಲ್ಲಿ ಲಿಖಿತವಾಗಿ ವರದಿ ನೀಡಲು ಸೂಚಿಸಿದೆ.