ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿದೆ. ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿರುವಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ನಡುವೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ತಮ್ಮ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.
MP ರೇಣುಕಾಚಾರ್ಯ ಹೈದರಾಬಾದ್ಗೆ ಹೋಗಿದ್ದು ಮರೆತಿದ್ದಾರೆ. ನರ್ಸ್ ಜಯಲಕ್ಷ್ಮೀ ಪ್ರಕರಣ ಮರೆತಿದ್ದಾರೆ. ಹರತಾಳು ಹಾಲಪ್ಪ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ. ಅಲ್ಲಿ ಸ್ನೇಹಿತನ ಪತ್ನಿ ಮೇಲೆಯೇ ಅತ್ಯಾಚಾರ ಮಾಡಿದ್ದ. ನಾನು ಉಂಡ ಮನೆಗೆ ಮದ್ದು ಹಾಕುತ್ತೇನೆಂದು ಮಾತಾಡ್ತೀಯ. ಎಸ್.ಆರ್.ವಿಶ್ವನಾಥ್ ನಾನ್ನನ್ನು ಅರೆಹುಚ್ಚ ಎಂದಿದ್ದಾರೆ. ನನ್ನಂತಹ ಅರೆಹುಚ್ಚನಿಂದ ನೀನು ಬಿಡಿಎ ಅಧ್ಯಕ್ಷನಾಗಿದ್ದೀಯ. ವಸ್ತುಪ್ರದರ್ಶನ ಕೇಂದ್ರದಲ್ಲಿ ಮಾಡಿದ್ದ ಕೇರ್ ಸೆಂಟರ್ ಎಲ್ಲಿ. 10 ಸಾವಿರ ಬೆಡ್ ಕೇರ್ ಸೆಂಟರ್ನಲ್ಲಿ ಎಷ್ಟು ಹೊಡೆದಿದ್ದೀಯಾ? ಎಂದು ಏಕವಚನದಲ್ಲೇ ವಾಗ್ದಾಳೆ ನಡೆಸಿದರು.
ಈಶ್ವರಪ್ಪನವರ ವಿರುದ್ಧವೂ ಕಿಡಿಕಾರಿದ ಹೆಚ್. ವಿಶ್ವನಾಥ್, ನಾವು ಬಂದಮೇಲೆ ತಾನೆ ಬಹುಮತ ಬಂದಿದ್ದು, ಈಶ್ವರಪ್ಪನವರೇ, ಇಷ್ಟು ಸಣ್ಣ ವಿಷಯ ಅರ್ಥ ಆಗಲ್ವೇ? ಈಶ್ವರಪ್ಪ ಯಾಕೆ ರಾಜ್ಯಪಾಲರ ಬಳಿ ಹೋಗಿದ್ಯಾಕೆ? ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದೂರು ನೀಡಿಲ್ವಾ? ಈ ವಿಷಯ ಈಗ ಚರ್ಚೆಯಾಗುವುದಿಲ್ಲ, ಹೇಳುವಂತ ಧೈರ್ಯ ಯಾರಿಗೂ ಇಲ್ಲ ಎಂದು ನೇರ ಆರೋಪಗಳನ್ನು ಮಾಡಿದ್ರು.
ಭದ್ರಾ ಮೇಲ್ದಂಡೆ ಯೋಜನೆಯ 21,470 ಕೋಟಿ ರೂ. ಕಾಮಗಾರಿ ಟೆಂಡರ್ನಲ್ಲಿ ಅಕ್ರಮ ಆಗಿದೆ. ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಎಲ್ಲ ಕಡೆ ಹಸ್ತಕ್ಷೇಪ ಮಾಡುತ್ತಿದ್ದಾರೆ. ಎಲ್ಲ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಬಗ್ಗೆ ರಾಜ್ಯಕ್ಕೇ ಗೊತ್ತಿದೆ. ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವೂ ಇದೆ. ಯಡಿಯೂರಪ್ಪ ಮಕ್ಕಳಿಂದ ಜೈಲಿಗೆ ಹೋಗಿದ್ದರು. ಈಗ ಮತ್ತೆ ಎರಡನೇ ಬಾರಿಗೆ BSY ಜೈಲಿಗೆ ಹೋಗಬಾರದು. ವಿಜಯೇಂದ್ರ ದೆಹಲಿಗೆ ಪದೇಪದೆ ಹೋಗೋದು ಏಕೆ? ಇಡಿಯಲ್ಲಿ ಪ್ರಕರಣ ಇದೆ ಹಾಗಾಗಿ ದೆಹಲಿಗೆ ಹೋಗ್ತಾರೆ ಎಂದು ತಿಳಿಸಿದರು.
ನಿನ್ನೆ ಅರುಣ್ ಸಿಂಗ್ ಭೇಟಿ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್, ಪಕ್ಷದ ರಾಜಕಾರಣ, ಆಡಳಿತ, ವ್ಯವಸ್ಥೆ ಬಗ್ಗೆ ಸವಿಸ್ತಾರವಾಗಿ ನಿವೇದನೆ ಮಾಡಿಕೊಂಡಿದ್ದೇನೆ. ಇದೇ ರೀತಿ ಆಡಳಿತ ನಡೆಸಿದರೆ ದುರಂತ ಅನುಭವಿಸಬೇಕಾಗುತ್ತದೆ, 2024ರ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರದಿಂದ ಆಗುತ್ತಿರುವ ಅನಾಹುತ ತಪ್ಪಿಸಬೇಕು. ಸಾರ್ವಜನಿಕವಾಗಿ ಕುಸಿಯುತ್ತಿರುವ ಚಿಕಿತ್ಸೆ ನೀಡಬೇಕು. ನಾಯಕತ್ವ ವಿಚಾರವೇ ಅತ್ಯಂತ ಮುಖ್ಯ, ಯಡಿಯೂರಪ್ಪ ಸಿಎಂ ಆಗಲೂ ನಮ್ಮ ಪಾತ್ರವೂ ಇದೆ ಎಂದರು.