ಬೆಂಗಳೂರು: ದೆಹಲಿ ಗಡಿಯ ಗಾಝಿಯಾಬಾದ್‍ನ ಲೋನಿಯಲ್ಲಿ ಮುಸ್ಲಿಂ ವೃದ್ಧನೋರ್ವನ ಮೇಲಿನ ಹಲ್ಲೆ ವೀಡಿಯೋ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಈ ವೀಡಿಯೋ ಬಿತ್ತರಿಸಿದ್ದಕ್ಕೆ ದೈತ್ಯ ಕಂಪನಿ ಟ್ವಿಟ್ಟರ್ ವಿರುದ್ಧವೇ ಎಫ್‍ಐಆರ್ ದಾಖಲಾಗಿದೆ. ಇದರ ಜೊತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದ ಪತ್ರಕರ್ತರು ಮತ್ತು ಕೆಲ ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ದಾಖಲಾಗಿದೆ. ವೀಡಿಯೋದಲ್ಲಿ ವೃದ್ಧನ ಗಡ್ಡ ಕತ್ತರಿಸಿ, ಬಲವಂತವಾಗಿ ಜೈಶ್ರೀರಾಮ ಘೋಷಣೆ ಕೂಗುವಂತೆ ಒತ್ತಡ ಹಾಕಲಾಗಿತ್ತು. ಆದ್ರೆ ವಿಡಿಯೋ ವೈರಲ್ ಬಳಿಕ ಪೊಲೀಸರು ಈ ಪ್ರಕರಣಕ್ಕೆ ಹೊಸ ಆಯಾಮವನ್ನೇ ನೀಡಿದರು.
ಚೌದರಿ ಅಬ್ದುಲ್ ಸಮದ್ ಹಲ್ಲೆಗೊಳಗಾದ ವೃದ್ಧ. ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ವೃದ್ಧನನ್ನು ಅಪಹರಿಸಿ ಅರಣ್ಯ ಪ್ರದೇಶದಲ್ಲಿ ಕೂಡಿ ಹಾಕಿದ್ದರು. ನಂತರ ಜೈಶ್ರೀರಾಮ ಘೋಷಣೆ ಕೂಗುವಂತೆ ಒತ್ತಡ ಹಾಕಿ, ಆತನ ಗಡ್ಡವನ್ನ ಕತ್ತರಿಸಿ ನೀಚರು ಅಟ್ಟಹಾಸ ಮರೆದಿದ್ದರು. ಇದೀಗ ಪೊಲೀಸರು ನೀಡಿ ಹೊಸ ಆಯಾಮ ಸುಳ್ಳು ಎಂದು ವೃದ್ಧನ ಕುಟುಂಬಸ್ಥರು ಹೇಳುತ್ತಿದ್ದಾರೆ.
ಪೊಲೀಸರು ಹೇಳಿದ್ದೇನು? ಹಲ್ಲೆಗೊಳಗಾದ ವೃದ್ಧ ತಾಯತಗಳನ್ನು ಮಾರುತ್ತಿದ್ದನು. ಆದ್ರೆ ತಾಯತಗಳು ಕೆಲಸ ಮಾಡಿಲ್ಲ ಎಂದು ಕೆಲವರು ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಎರಡೂ ಸಮುದಾಯದ ಜನರಿದ್ದರು ಅನ್ನೋ ಹಸಿ ಸುಳ್ಳನ್ನ ಗೋಧಿ ಮೀಡಿಯಾಗಳ ಮುಂದಿಟ್ಟರು. ಅವರಿಗೂ ಅಷ್ಟೇ ಬೇಕಿತ್ತು. ಇದೇ ಸುಳ್ಳನ್ನು ಸತ್ಯ ಎಂದು ಹೇಳಿ ವಿಜೃಂಭಿಸಲಾಯ್ತು. ಆದ್ರೆ ಈ ಸಂಬಂಧ ವೃದ್ಧನ ಹೇಳಿಕೆ ವೀಡಿಯೋ ಎಲ್ಲಿ ಪ್ರಸಾರವಾಗದಂತೆ ನೋಡಿಕೊಳ್ಳಲಾಯ್ತು ಅನ್ನೋ ಆರೋಪಗಳು ಕೇಳಿ ಬರುತ್ತಿವೆ.
ವೃದ್ಧನ ಹೊಸ ವಿಡಿಯೋ: ಇಬ್ಬರು ಆಟೋದವರು ನನ್ನ ಮುಖಕ್ಕೆ ಬಟ್ಟೆ ಮುಚ್ಚಿ ಕರೆದುಕೊಂಡು ಹೋದರು. ಬಳಿಕೆ ನನಗೆ ಹೊಡೆಯಲು ಪ್ರಾರಂಭಿಸಿದರು. ಅಲ್ಲಿಂದ ನನ್ನ ಕಾಡಿಗೆ ಕರೆದುಕೊಂಡುಹೋಗಿ ಒಂದು ಕೋಣೆಯಲ್ಲಿಟ್ಟರು. ಅವರು ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು, ನಾನು ಯಾ ಅಲ್ಲಾಹ್ ಎಂದು ಕೂಗಿದರೆ ಹೊಡೆಯುತ್ತಿದ್ದರು. ಪಿಸ್ತೂಲ್ ಹಣೆಗೆ ಇಟ್ಟಿದ್ದು, ನನ್ನ ಮೇಲೆ ಭೀಕರ ಹಲ್ಲೆ ನಡೆಸಿದ್ದು, ನಾವು ಮುಸ್ಲಿಮರಿಗೆ ಹಲ್ಲೆ ನಡೆಸಿದ್ದೇವೆ ಎಂದಿದ್ದಾರೆ? ಅವರು ನನ್ನ ಗಡ್ಡವನ್ನು ಕಿತ್ತರು ಎಂದು ಹೇಳಿದ್ದಾರೆ.
ಅಬ್ದುಲ್ ಮಗ ಬಬ್ಲೂ ಸೈಪಿ ಸ್ಪಷ್ಟನೆ: ನಮ್ಮ ತಂದೆ ಅಥವಾ ಕುಟುಂಬ ತಾಯತಗಳನ್ನು ಮಾರುತ್ತಿಲ್ಲ. ಪೊಲೀಸರು ತಾಯತ ಮಾರುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದು, ಅದನ್ನು ತನಿಖೆ ನಡೆಸಲು ಎಂದು ಆಗ್ರಹಿಸಿದ್ದಾರೆ.
ಟ್ವಿಟರ್ ಮತ್ತು ಇತರ ಎಂಟು ಜನರ ವಿರುದ್ಧ ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ), 505 (ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಮುಂತಾದ ಪ್ರಕರಣ ದಾಖಲಾಗಿದೆ.