ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ಅವರ ವಯೋಸಹಜ ಕಾರಣದಿಂದ ಅವರ ಹೆಸರಿನಲ್ಲಿ ಹಲವರು ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅವರು ಗೌರವದ ನಿವೃತ್ತಿ ತೆಗೆದುಕೊಂಡು ಹೊಸಬರಿಗೆ ಅವಕಾಶ ನೀಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಪೀಠದ ಜಯಮೃತ್ಯುಂಜಯ ಮಹಾಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ವೇಳೆ ಇಂತಹದೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು ಪಂಚಮಸಾಲಿ ಲಿಂಗಾಯತದಲ್ಲಿರುವ ಸಮರ್ಥ ನಾಯಕರಿಗೆ ಮತ್ತೆ ನಾಯಕತ್ವ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅರುಣ್ ಸಿಂಗ್ ಭೇಟಿ ವೇಳೆ, ಬಿ.ಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ ಆದರೂ ಅವರು ಸಮಾಜದ ಋಣ ತೀರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹು ಸಂಖ್ಯಾತ ಪಂಚಮಸಾಲಿ ಸಮಾಜವನ್ನು ಬಳಸಿಕೊಂಡು ಅಧಿಕಾರದ ಗದ್ದುಗೆಗೆ ಏರಿದ ಯಡಿಯೂರಪ್ಪ ಸಮಾಜವನ್ನು ಮರೆತು,ಸಮಾಜದ ನಾಯಕರಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದ್ದು ನಮಗೆ ಬೇಸರ ತರಿಸಿದೆ. ಮೀಸಲಾತಿ ಹೋರಾಟದ ಸಮಯದಲ್ಲಿ ಯಡಿಯೂರಪ್ಪ ನವರ ಪುತ್ರ ವಿಜಯೇಂದ್ರ ಆಡಿರುವ ಮೋಸ ಆಟ ಸಮಾಜ ಯಾವತ್ತೂ ಮರೆಯುವುದಿಲ್ಲ, ಯಡಿಯೂರಪ್ಪನವರ ನಂತರ ನಾಯಕತ್ವ ವಹಿಸಿಕೊಳ್ಳಲು ನಮ್ಮ ಸಮಾಜ ಸಮರ್ಥವಾಗಿದೆ. ಹೀಗಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರು ಇದನ್ನು ಪರಿಗಣಿಸಿ ಮುಖ್ಯಮಂತ್ರಿ ಬದಲಾಯಿಸುವ ನಿರ್ಧಾರ ಹೈಕಮಾಂಡ್ ತಗೆದುಕೊಂಡರೆ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದ್ದಾರೆ.
ಜಯಮೃತ್ಯುಂಜಯ ಮಹಾಸ್ವಾಮಿಜೀ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು ಲಿಂಗಾಯತ ಮೀಸಲಾತಿ ಹೋರಾಟದ ಬಿಸಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸ್ಫೋಟವಾಗಿದೆ. ಈ ಹೇಳಿಕೆಯನ್ನು ಹೈಕಮಾಂಡ್ ಅದೇಗೆ ಪರಿಗಣಿಸುತ್ತೆ ಕಾದು ನೋಡಬೇಕಿದೆ.