ಡೆಹಾರೂಡನ್: ಕುಂಭಮೇಳದಲ್ಲಿ ಸಾವಿರ ಸಾವಿರ ನಕಲಿ ಕೊರೊನಾ ರಿಪೋರ್ಟ್ ನೀಡಿರೋದು ಬೆಳಕಿಗೆ ಬಂದಿದೆ. ಕೊರೊನಾ ಎರಡನೇ ಅಲೆ ಆರಂಭದ ದಿನಗಳಲ್ಲಿ ಲಕ್ಷ ಲಕ್ಷ ಸಾಧು ಸಂತರು ಕುಂಭಮೇಳದಲ್ಲಿ ಭಾಗಿಯಾಗಿ ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದು ಕೊರೊನಾ ಸ್ಫೋಟಕ್ಕೆ ಕಾರಣವಾಗುತ್ತೆ ಅನ್ನೋ ಆತಂಕ ಸಹ ಎದುರಾಗಿತ್ತು. ಇದೀಗ ಇದೇ ಕುಂಭಮೇಳದಲ್ಲಿ ನಕಲಿ ಕೊರೊನಾ ರಿಪೋರ್ಟ್ ನೀಡಿರುವ ಬಹುದೊಡ್ಡ ಪ್ರಕರಣ ಬೆಳಕಿಗೆ ಬಂದಿದೆ.

ಕೊರೊನಾ ಹಿನ್ನೆಲೆ ಅಲ್ಲಿಯ ಜಿಲ್ಲಾಡಳಿತ ಹೆಚ್ಚು ಹೆಚ್ಚು ಕ್ಲಿನಿಕಲ್, ಕೊರೊನಾ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಿತ್ತು. ಕೊರೊನಾ ಪರೀಕ್ಷೆ ನಡೆಸಲು 20 ಖಾಸಗಿ ಲ್ಯಾಬ್ ಗಳನ್ನು ಆರಂಭಿಸಿ, ಅವುಗಳಿಗೆ ಗುತ್ತಿಗೆ ನೀಡಲಾಗಿತ್ತು. ಈ ಲ್ಯಾಬ್ ಗಳು ಕುಂಭಮೇಳದಲ್ಲಿ ಭಾಗಿಯಾದವರನ್ನು ಆರ್ ಟಿ-ಪಿಸಿಆರ್ ಪರೀಕ್ಷೆ ನಡೆಸಿ ವರದಿ ನೀಡುತ್ತಿದ್ದವು. ಆದ್ರೆ ಈ ಖಾಸಗಿ ಲ್ಯಾಬ್ ಸರ್ಕಾರದ ಟಾರ್ಗೆಟ್ ತಲುಪಲು ಮತ್ತು ಹೆಚ್ಚು ಹಣ ಪಡೆಯಲು ನಕಲಿ ರಿಪೋರ್ಟ್ ನೀಡಿವೆ.

ಸರ್ಕಾರನ ಲ್ಯಾಬ್ ಗಳು ನಡೆಸಿದ ಪರೀಕ್ಷೆಗಳ ಆಧಾರದ ಮೇಲೆ ಹಣ ನೀಡುತ್ತಿತ್ತು. ಈ ಹಿನ್ನೆಲೆ ಲ್ಯಾಬ್ ಗಳು ಅನೇಕ ಆಧಾರ್ ಕಾರ್ಡ್ ನಂಬರ್ ಪಡೆದು ಆರ್.ಟಿ-ಪಿಸಿಆರ್ ಪರೀಕ್ಷೆ ನಡೆಸಿ ಎಂದು ಹೇಳಿ ಎಲ್ಲ ವರದಿಯನ್ನು ನೆಗೆಟಿವ್ ಎಂದು ನೀಡಲಾಗಿದೆ. ಈ ಆರೋಪಗಳು ಕೇಳಿ ಬಂದ ಹಿನ್ನೆಲೆ ಖಾಸಗಿ ಲ್ಯಾಬ್ ಗಳಿಗೆ ನೀಡಬೇಕಿದ್ದ ಮೂರು ಕೋಟಿ ರೂಪಾಯಿ ಹಣವನ್ನ ತಡೆ ಹಿಡಿದಿದೆ.

ಈ ಕುರಿತು ತನಿಖೆ ನಡೆಸಲು ಹರಿದ್ವಾರದ ಜಿಲ್ಲಾಧಿಕಾರಿ ಸಿ. ರವಿಶಂಕರ್ ಸಮಿತಿಯನ್ನ ರಚಿಸಿದ್ದಾರೆ. ಸಿಓಡಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಲ್ಯಾಬ್ ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದೆ. ಅದೇ ರೀತಿ ಆಧಾರ್ ಕಾರ್ಡ್ ನಂಬರ್ ಸಿಬ್ಬಂದಿಗೆ ದೊರೆತ ಬಗ್ಗೆ ತನಿಖೆ ನಡೆಸಲಾಗುತ್ತಿದೆ.