ಬೆಂಗಳೂರು : ಕಳೆದೊಂದು ತಿಂಗಳನಿಂದ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಕೆಲವು ಸಚಿವರು, ಶಾಸಕರು ನಾಯಕತ್ವ ಬದಲಾಯಿಸಲು ತೆರೆ ಮರೆಯಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಈ ಬೆಳವಣಿಗಗಳ ನಡುವೆ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು ಕುತೂಹಲ ಹೆಚ್ಚಿಸಿದೆ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಇರಲಿದ್ದು ರಾಜ್ಯ ನಾಯಕರ ಜೊತೆಗೆ ಚರ್ಚೆ ಮಾಡಲಿದ್ದಾರೆ.
ಮಾಹಿತಿಗಳ ಪ್ರಕಾರ ಅರುಣ್ ಸಿಂಗ್ ಮೂರು ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕಾ ಅಥಾವ ಅದನ್ನು ತಾತ್ಕಾಲಿಕವಾಗಿ ಮುಂದೂಡಬಹುದಾ, ಒಂದು ವೇಳೆ ನಾಯಕತ್ವ ಬದಲಾವಣೆ ಮಾಡುವುದುದಾದರೇ ಹೊಸ ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡಬಹುದು ಮತ್ತು ಈ ನಾಯಕತ್ವ ಬದಲಾವಣೆ ಪ್ರಕ್ರಿಯೆಯಿಂದಾಗುವ ಸಾಧಕ ಬಾಧಕಗಳೇನು ಎಂದು ಚರ್ಚೆ ಮಾಡಲಿದ್ದಾರೆ.
ಇನ್ನು ಎರಡನೇದಾಗಿ 2023 ರ ವಿಧಾನಸಭೆ ಚುನಾವಣೆ ಪಕ್ಷವನ್ನು ಸಜ್ಜು ಮಾಡುವ ನಿಟ್ಟಿನಲ್ಲಿ ಪಕ್ಷದಲ್ಲಿ ಆಗಬೇಕಿರುವ ಬದಲಾವಣೆಗಳೇನು ಎಂದು ಚರ್ಚೆ ಮಾಡಲಿದ್ದಾರೆ. ಇನ್ನು ಕೊನೆಯದಾಗಿ ಸಚಿವರ ಮೌಲ್ಯ ಮಾಪನವೂ ನಡೆಯುವ ಸಾಧ್ಯತೆಗಳಿದ್ದು ಸಚಿವರ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಯಲಿದೆ.
ಸಚಿವರು, ಪ್ರಮುಖ ಶಾಸಕರು ಹಾಗೂ ಪಕ್ಷದ ಹಿರಿಯ ಪದಾಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ವಿಸ್ತೃತ ವರದಿಯನ್ನು ವರಿಷ್ಠರಿಗೆ ನೀಡಲಿದ್ದಾರೆ. ಅರುಣ್ ಸಿಂಗ್ ನೀಡುವ ಈ ವರದಿ ರಾಜ್ಯ ಬಿಜೆಪಿಯಲ್ಲಿ ಮಹತ್ವ ಬದಲಾವಣೆ ತರಬಹುದು ಮತ್ತು ಸಿಎಂ ಬಿಎಸ್‌ವೈ ಕುರ್ಚಿಯ ಭವಿಷ್ಯಯನ್ನು ನಿರ್ಧರಿಸಲಿದೆ ಎಂದು ಹೇಳಲಾಗಿದೆ.