ಬೆಂಗಳೂರು: ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ರಾಮ ಮಂದಿರ ಸ್ಕ್ಯಾಮ್ ಹೆಸರಿನಲ್ಲಿ ಹ್ಯಾಶ್ ಟ್ರೆಂಡಿಂಗ್ ಆಗಿತ್ತು. ಈ ಹ್ಯಾಶ್ ಟ್ಯಾಗ್ ನೋಡಿದ ಕೋಟಿ ಭಾರತೀಯರು ಒಂದು ಕ್ಷಣ ಶಾಕ್ ಆದ್ರು. ಅರೇ ಇದೇನಿದು, ರಾಮಮಂದಿರದಲ್ಲಿಯೂ ಭ್ರಷ್ಟಾಚಾರ ಅಂತ ಗೂಗಲ್ ತಡಕಾಡಿದ್ರು. ಈ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದೇಕೆ ಎಂಬುದರ ಉತ್ತರ ಇಲ್ಲಿದೆ.
ಕಳೆದ ವರ್ಷ ರಾಮಮಂದಿರ ಟ್ರಸ್ಟ್ ಸ್ಥಾಪಿಸಿ, ಭೂಮಿ ಪೂಜೆಯೂ ನೆರವೇರಿಸಲಾಗಿದೆ. ರಾಮ ಮಂದಿರದ ನಿರ್ಮಾಣದ ಕಾಮಗಾರಿಗೂ ನಡೆಯುತ್ತಿದೆ. ದೇವಸ್ಥಾನದ ನಿರ್ಮಾಣದ ಜವಬ್ದಾರಿ ತೆಗೆದುಕೊಂಡಿರುವ ಟ್ರಸ್ಟ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಉತ್ತರ ಪ್ರದೇಶದ ವಿಪಕ್ಷಗಳಾದ ಸಮಾಜವಾದಿ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಷ ಆರೋಪಿಸಿವೆ. ಆದ್ರೆ ಈ ಆರೋಪವನ್ನು ದೇವಸ್ಥಾನದ ಟ್ರಸ್ಟ್ ತಳ್ಳಿ ಹಾಕಿದೆ.

ಏನದು ಆರೋಪ?:
ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳು ಓರ್ವನಿಂದ 2 ಕೋಟಿ ರೂ. ನೀಡಿ ಆಸ್ತಿಯನ್ನು ಖರೀದಿಸುತ್ತಾರೆ. ಇದೇ ಆಸ್ತಿಯನ್ನು ಕೆಲವೇ ನಿಮಿಷಗಳಲ್ಲಿ ಉದ್ಯಮಿಗಳಿಂದ ದೇವಸ್ಥಾನದ ಟ್ರಸ್ಟ್ 18.5 ಕೋಟಿ ನೀಡಿ ಖರೀದಿಸಿದೆ ಎಂಬುವುದು ವಿಪಕ್ಷಗಳ ಆರೋಪ. ಎರಡೇ ನಿಮಿಷದಲ್ಲಿ ಆ ಆಸ್ತಿಯ ಬೆಲೆ ಏರಿಕೆಯಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿವೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಗಹಿಸಿವೆ.
ದೇಶದ ಜನತೆಗೆ ಅವಮಾನ: ದೇಶದ ಜನರು ತಮ್ಮ ಉಳಿತಾಯದ ಹಣವನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಿದ್ದಾರೆ. ರಾಮ ಮಂದಿರ ಟ್ರಸ್ಟ್ ಖರೀದಿಸಿರುವ ಆಸ್ತಿಯ ಮೌಲ್ಯ ಕೆಲವೇ ಕ್ಷಣಗಳಲ್ಲಿ 16.5 ಕೋಟಿ ಏರಿಕೆಯಾಗಿದ್ದು ಹೇಗೆ? ಉಳಿತಾಯ ಹಣ ದಾನ ಪಡೆದ ಟ್ರಸ್ಟ್ ದೇಶದ 120 ಕೋಟಿ ಜನರನ್ನು ಅವಮಾನಿಸಿದ ಎಂದು ಸಮಾಜವಾದಿ ಪಕ್ಷದ ಮುಖಂಡ, ಮಾಜಿ ಸಚಿವ ಪವನ್ ಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನ ಹೆಸರಿನಲ್ಲಿ ಭ್ರಷ್ಟಾಚಾರನಾ?: ಭಗವಾನ್ ರಾಮನ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತೆ ಅಂದ್ರೆ ಯಾರಿಗೂ ನಂಬಲು ಆಗಲ್ಲ. ಆದ್ರೆ ಟ್ರಸ್ಟ್ ನಡೆಸಿರುವ ವಹಿವಾಟು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಟ್ರಸ್ಟ್ ಸ್ವೀಕರಿಸಿದ ದಾನವನ್ನ ದುರಪಯೋಗ ಮಾಡಿಕೊಂಡಿರೋದು ತೋರಿಸುತ್ತಿದೆ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

ನಾವೂ ಚಿಂತಿಸಲ್ಲ, ನೀವೂ ಚಿಂತಿಸಬೇಡಿ: ಇಂತಹ ಆರೋಪಗಳು ಶತಮಾನಗಳಿಂದಲೂ ಕೇಳುತ್ತಿದ್ದೇವೆ. ಈ ಆರೋಪಗಳ ಬಗ್ಗೆ ನಾವೂ ಚಿಂತಿಸಲ್ಲ. ನೀವೂ ಚಿಂತಿಸಬೇಡಿ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಕಾರ್ಯದರ್ಶಿ, ವಿಹೆಚ್‍ಪಿ ನಾಯಕ ಚಂಪತ್ ರೈ ಹೇಳಿದ್ದಾರೆ.