ನವದೆಹಲಿ : ಕೊರೋನಾ ಸೋಂಕು ತಗುಲಿದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ದೆಹಲಿ ಏಮ್ಸ್ ಆಸ್ಪತ್ರೆ ವೈದ್ಯರು ಮತ್ತು ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಭಾರತೀಯ ಸಾರ್ವಜನಿಕ ಆರೋಗ್ಯ ಸಂಘ ಮತ್ತು ಭಾರತೀಯ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ಸಾಮಾಜಿಕ ಔಷಧ ಸಂಘದ ಜಂಟಿ ಕಾರ್ಯಪಡೆ ಒಟ್ಟಾಗಿ ನಡೆಸಿದ ಅಧ್ಯಯನದ ಬಳಿಕ ಈ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

ವಿವೇಚನೆಯಿಲ್ಲದೆ ಎಲ್ಲ ವಯೋಮಾನದವರಿಗೆ ಲಸಿಕೆ ಹಾಕುವುದು ತಪ್ಪು ಸೋಂಕಿತರಿಗೆ ವ್ಯಾಕ್ಸಿನ್ ಹಾಕುವುದರಿಂದ ರೂಪಾಂತರಿತ ತಳಿಗಳ ಸೃಷ್ಟಿಯಾಗುವ ಸಾಧ್ಯತೆಗಳಿದೆ. ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ, ಹೀಗಾಗಿ ಅವರ ಬದಲು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚು ಲಸಿಕೆ ನೀಡಿ, ದುರ್ಬಲರಿಗೆ ಮೊದಲು ನೀಡಿ ಎಂದು ತಜ್ಞರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗಶಾಸ್ತ್ರೀಯ ಡೇಟಾ ಪ್ರಕಾರ ವ್ಯಾಕ್ಸಿನ್ ನೀಡಬೇಕು, ಒಟ್ಟಿಗೆ ಎಲ್ಲರಿಗೂ ಹಾಕಿದರೆ ಸಂಪನ್ಮೂಲದ ಸಮಸ್ಯೆ ಆಗಲಿದೆ. ಕೊರೋನಾ ತಡೆಯಲು ವ್ಯಾಕ್ಸಿನೇಷನ್ ಪರಿಣಾಮಕಾರಿ ಅಸ್ತ್ರ, ಅದರ ಗರಿಷ್ಠ ಲಾಭ ಪಡೆಯಲು ಕಾರ್ಯತಂತ್ರ ರೂಪಿಸಬೇಕು ಹೀಗಾಗಿ ಸೋಂಕು ತಗುಲಿದ್ದವರನ್ನು ಬಿಟ್ಟು ಬೇರೆಯವರಿಗೆ ಲಸಿಕೆ ನೀಡಬಹುದು ಎಂದು ಸಾರ್ವಜನಿಕ ಆರೋಗ್ಯ ತಜ್ಞರ ಜಂಟಿ ಕಾರ್ಯಪಡೆ ಕೇಂದ್ರ ಸರ್ಕಾರಕ್ಕೆ ಮಹತ್ವದ ವರದಿ ನೀಡಿದೆ.