ಬೆಂಗಳೂರು : ದಲಿತ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಇಂದು ಸಂಜೆ ಸುಮಾರು 4:45 ರ ವೇಳೆಗೆ ಸಾವನ್ನಪ್ಪಿದ್ದು ಬೆಂಗಳೂರಿನಲ್ಲಿ ಇಂದೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿದ್ಧಲಿಂಗಯ್ಯನವರು ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ಸಾಹಿತಿ, ಕವಿ, ಹುಟ್ಟು ಹೋರಾಟಗಾರಾಗಿದ್ದ ಅವರು ಅಧ್ಯಾಪಕ, ಪ್ರಾಧ್ಯಾಪಕ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಎರಡು ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

1997 ರಲ್ಲಿ ಇವರ ಗ್ರಾಮ ದೇವತೆಗಳು ಮಹಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಲಭಿಸಿತ್ತು. ಹೊಲೆ ಮಾದಿಗರು ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು ಸೇರಿದಂತೆ ಒಟ್ಟು 8 ಕವನ ಸಂಕಲನ, ಹಕ್ಕಿ ನೋಟ, ಎಡಬಲ ಸೇರಿದಂತೆ ಒಟ್ಟು ನಾಲ್ಕು ವಿಮರ್ಶನಾ ಕೃತಿಗಳು, ಏಕಲವ್ಯ, ನೆಲಸಮ ಮತ್ತು ಪಂಚನ ಹೆಸರಿನ ಮೂರು ನಾಟಕಗಳನ್ನು ಅವರು ಬರೆದಿದ್ದಾರೆ. ಊರು ಕೇರಿ ಭಾಗ ಒಂದು ಮತ್ತು ಎರಡು ಅವರ ಆತ್ಮಕಥೆಗಳಾಗಿದ್ದು ಸಾಕಷ್ಟು ಜನಮನ್ನಣೆ ಗಳಿಸಿದ್ದವು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಜೋತ್ಸವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ,
ಬಾಬು ಜಗಜೀವನರಾಮ್ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿ ಒಟ್ಟು 16ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿದೆ.