ಯೆಸ್, ತನಿಖೆಗೆ ಆದೇಶ ನೀಡಿದ್ದಕ್ಕೆ ನನ್ನ ವರ್ಗಾವಣೆ ಆಯ್ತು!
ಮೈಸೂರು: ನನ್ನ ವರ್ಗಾವಣೆಗೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮತ್ತು ಮೂಡಾ ಅಧ್ಯಕ್ಷ ಬಿಜೆಪಿಯ ರಾಜೀವ್ ನನ್ನ ವರ್ಗಾವಣೆಗೆ ಕಾರಣ ಎಂದು ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ರಾಜಕಾರಣಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಕಾರಣ ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಮಾಡಿದ್ರು ಎಂದು ಹೇಳಿದ್ದಾರೆ.

ಕೆ.ಆರ್.ನಗರದ ಮಾನ್ಯ ಶಾಸಕರ ಕೆಲ ಅಕ್ರಮ ಭೂ ವ್ಯವಹಾರಗಳ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲು ಮುಂದಾದೆ. ನಾನು ಮೈಸೂರಿಗೆ ಬಂದಾಗಿನಿಂದ ಮತ್ತು ವರ್ಗಾವಣೆಯಾದ ನಂತರವೂ ಸಾ.ರಾ.ಮಹೇಶ್ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಕ್ರಮ ಕೈಗೊಳ್ಳದಂತೆ ಈ ಸುಳ್ಳು ಆರೋಪ ಮಾಡುವ ಮೂಲಕ ನಮ್ಮನ್ನು ಬೆದರಿಸುವ ತಂತ್ರಗಾರಿಕೆ ರಚಿಸಲಾಯ್ತು. ಅಂತಿಮವಾಗಿ ನನ್ನ ವರ್ಗಾವಣೆ ಮಾಡಿಸಲಾಯ್ತು ಎಂದು ಆರೋಪಿಸಿದ್ದಾರೆ.

ನಗರದಲ್ಲಿನ ಕೆಲ ಭೂ ಅಕ್ರಮಗಳ ದಾಖಲೆಗಳನ್ನು ಪರಿಶೀಲಿಸಿ ಅದರ ಮಾಹಿತಿ ಪಡೆದು ವಿಚಾರಣೆ ನಡೆಸಲಾಯಿತು. ಮೇಲ್ನೋಟಕ್ಕೆ ಇಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ಆದ್ದರಿಂದ ಈ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಎರಡು ಆದೇಶಗಳು:
ಆ ಎರಡು ಆದೇಶಗಳು:
- ಆದೇಶ 1: ಲಿಂಗಾಬುಧಿ ಕೆರೆಯ ಅಂಗಳದ ಸಮೀಪ ರೆಸಾರ್ಟ್ ಆರಂಭಿಸುವ ಕಾರ್ಯಕ್ಕೆ ರೋಹಿಣಿ ಸಿಂಧೂರಿ ಬ್ರೇಕ್ ಹಾಕಿದ್ದರು. ಲಿಂಗಾಬುಧಿ ಗ್ರಾಮದ ಸರ್ವೇ ನಂಬರ್ 124/2 ರಲ್ಲಿ 1.39 ಏಕರೆಯ ಭೂ ಪರಿವರ್ತನೆ ರದ್ದು ಕುರಿತು ಆದೇಶ ಹೊರಡಿಸಿದ್ದರು.
- ಆದೇಶ 2: ಕೇರ್ಗಳಿ ಗ್ರಾಮದ ಸರ್ವೇ ನಂಬರ್ 155ರ 50 ಏಕರೆಗೂ ಹೆಚ್ಚಿನ ಜಮೀನಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ಪರಿಹಾರ ವಿಚಾರದಲ್ಲಿ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಸಹ ತನಿಖೆಗೆ ರೋಹಿಣಿ ಸಿಂಧೂರಿ ಆದೇಶಿಸಿದ್ದರು.