ಬೆಂಗಳೂರು : ಜೂನ್ 14 ರ ಬಳಿಕ 11 ಜಿಲ್ಲೆಗಳಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬಾಕಿ ಜಿಲ್ಲೆಗಳಲ್ಲಿ ನಿಯಮಗಳ ಸಡಿಲಿಕೆ ತಿರ್ಮಾನಿಸಿದೆ. ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಹಿರಿಯ ಸಚಿವರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಜೂನ್ 14 ರಂದು ಲಾಕ್ಡೌನ್ ಅಂತ್ಯ ಹಿನ್ನಲೆ ಲಾಕ್ಡೌನ್ ವಿಸ್ತರಣೆ ಮತ್ತು ಸಡಿಲಿಕೆ ಸಂಬಂಧ ಇಂದು ಸಿಎಂ ಬಿಎಸ್‌ವೈ ಮ್ಯಾರಥಾನ್ ಸಭೆಗಳನ್ನು ನಡೆಸಿದರು. ಬೆಳಗ್ಗೆ ಹನ್ನೊಂದು ಗಂಟೆಗೆ ಜಿಲ್ಲಾಧಿಕಾರಿಗಳೊಂದಿಗೆ, ಸಂಜೆ ಹಿರಿಯ ಸಚಿವರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರು.
ಮುಖ್ಯಮಂತ್ರಿ @BSYBJP ರವರು ಇಂದು – ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು – ಈ ಎಂಟು ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದ ಕುರಿತಂತೆ ವೀಡಿಯೋ ಸಂವಾದ ನಡೆಸಿದರು. (1/2) #KarnatakaFightsCorona pic.twitter.com/7gAwjk0Za2
— CM of Karnataka (@CMofKarnataka) June 10, 2021
ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು ಇನ್ನು ಕೆಲ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದರು. ಈ ಸಲಹೆ ಆಧರಿಸಿ ಸಿಎಂ ಬಿಎಸ್‌ವೈ ರಾಜ್ಯದಲ್ಲಿ 2-3 ಹಂತಗಳಲ್ಲಿ ಅನ್ಲಾಕ್ ಮಾಡಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ @BSYBJP ರವರು ಇಂದು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್-19 ಪರಿಸ್ಥಿತಿ ಕುರಿತಂತೆ ಸಭೆ ನಡೆಸಿದರು.#KarnatakaFightsCorona pic.twitter.com/saxV6Fm5hf
— CM of Karnataka (@CMofKarnataka) June 10, 2021
ಸದ್ಯ ಕೊರೊನಾ ಸೋಂಕು ಹೆಚ್ಚಿರುವ ಹಿನ್ನಲೆ, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಹಾಸನ, ಬೆಳಗಾವಿ, ದಕ್ಷಿಣಕನ್ನಡ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಜೂನ್ 14 ರ ಬಳಿಕವೂ ಒಂದು ವಾರ ಲಾಕ್ಡೌನ್ ವಿಸ್ತರಣೆ ಮಾಡಲು ನಿರ್ಧರಿಸಿದ್ದು ಬಾಕಿ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಅನ್ಲಾಕ್ ಮಾಡಲು ತಿರ್ಮಾನಿಸಿದೆ.
ಅನ್ಲಾಕ್ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟ, ಕಟ್ಟಡ ನಿರ್ಮಾಣ, ಮತ್ತು ಪೂರಕ ಸಾಮಾಗ್ರಿಗಳ ಮಾರಾಟ ಬಿಟ್ಟು ಉಳಿದ ಯಾವುದೇ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಿಲ್ಲ. ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಸಮಯ ವಿಸ್ತರಣೆ ಮಾಡಲಾಗಿದ್ದು, ಕಾರ್ಖಾನೆಗಳು 50% ಸಾಮರ್ಥ್ಯದೊಂದಿಗೆ, ಗಾರ್ಮೆಂಟ್‌ಗಳು 30% ಕಾರ್ಮಿಕರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.

ಸರ್ಕಾರ ಕಚೇರಿಗಳು 50% ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಬಾರ್‌ಗಳಲ್ಲಿ ಮಧ್ಯಾಹ್ನ 2 ವರೆಗೂ ಪಾರ್ಸಲ್ ಗೆ ಅವಕಾಶ ಕಲ್ಪಿಸಿದೆ. ಬೆಳಗ್ಗೆ 5 ರಿಂದ 10 ಗಂಟೆವರೆಗೂ ಪಾರ್ಕ್ ತೆರೆಯಲು ಗ್ರೀನ್ ಸಿಗ್ನಲ್ ನೀಡಲಾಗಿದೆ.

ಇನ್ನು ಖಾಸಗಿ ಕಚೇರಿಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿಲ್ಲ, ಸೋಂಕು ಹರಡುವ ಭೀತಿಯಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡದಿರಲು ಸರ್ಕಾರ ತಿರ್ಮಾನಿಸಿದೆ. ಲಾಕ್ಡೌನ್ ಆಗಿರುವ ಜಿಲ್ಲೆಗಳು ಸೇರಿ ಸರ್ಕಾರದ ಮುಂದಿನ ಆದೇಶದವರೆಗೂ ರಾಜ್ಯದಲ್ಲಿ ವಿಕೇಂಡ್ ಲಾಕ್ಡೌನ್ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.