ಚಿಕ್ಕಮಗಳೂರು : ರಾಜ್ಯದ ಪ್ರತಿ ಹಳ್ಳಿಯಲ್ಲೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಪ್ರತಿ ಗ್ರಾಮದಲ್ಲಿ ಒಂದಾದರೂ ಪಾಸಿಟಿವಿಟಿ ಕೇಸ್ ಕಂಡು ಬರುತ್ತಿದೆ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಗಡಿಯಲ್ಲಿರುವ ಮಾಲವಂತಿಗೆ ಗ್ರಾಮ ರಾಜ್ಯದ ಇತರೆ ಎಲ್ಲ ಹಳ್ಳಿಗಳಿಗಿಂತ ಭಿನ್ನವಾಗಿದೆ.
136 ಕುಟುಂಬಗಳು 632 ಜನಸಂಖ್ಯೆ ಹೊಂದಿರುವ ಈ ಪುಟ್ಟಗ್ರಾಮ ಸಂಪೂರ್ಣ ಕೊರೊನಾ ಮುಕ್ತವಾಗಿದೆ. ಕಳೆದ ಒಂದು ವರ್ಷದಿಂದ ಈವರೆಗೂ ಒಂದೇ ಒಂದು ಕೊರೊನಾ ಪಾಸಿಟಿವಿಟಿ ಪ್ರಕರಣಗಳು ವರದಿಯಾಗಿಲ್ಲ ಎಂದು ಸ್ಥಳೀಯ ಆರೋಗ್ಯ ಇಲಾಖೆ ಹೇಳಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಗ್ರಾಮದ ಎಲ್ಲ ಜನರಿಗೂ ಕೊರೊನಾ ಪರೀಕ್ಷೆ ನಡೆಸಿದ್ದು, ಕಟ್ಟುನಿಟ್ಟಾಗಿ ಕೊರೊನಾ ನಿಯಮಗಳನ್ನ ಪಾಲಿಸಲಾಗುತ್ತಿದೆ. ಯಾರೂ ಅನಗತ್ಯ ನಗರಗಳಿಗೆ ತೆರಳುವುದು ಮತ್ತು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಉಲ್ಲಂಘಿಸುವ ಕೆಲಸ ಮಾಡಿಲ್ಲ ಎನ್ನಲಾಗಿದೆ.
ಆಗ್ಗಾಗ್ಗೆ ಆಶಾ ಕಾರ್ಯಕರ್ತೆರ ಮೂಲಕ ಗ್ರಾಮದಲ್ಲಿ ಜನರ ಆರೋಗ್ಯ ಪರಿಶೀಲನೆ ನಡೆಯಲಿದ್ದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಕೂಡಲೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರಣಗಳಿಂದ ಗ್ರಾಮ ಸಂಪೂರ್ಣ ಕೊರೊನಾ ಮುಕ್ತವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.