ಬೆಂಗಳೂರು : ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೇಂದ್ರ ಸರ್ಕಾರವೇ ಉಚಿತ ವ್ಯಾಕ್ಸಿನ್ ನೀಡಲು ತಿರ್ಮಾನಿಸಲು ಕಾರಣ ಕಾಂಗ್ರೆಸ್ ಪ್ರತಿಭಟನೆಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಕಾಂಗ್ರೆಸ್ ಹೋರಾಟದ ಫಲವಾಗಿ ಇಂದು ಎಲ್ಲರಿಗೂ ಉಚಿತ ವ್ಯಾಕ್ಸಿನ್ ಸಿಗಲಿದೆ ಎಂದು ಅವರು ಹೇಳಿದರು.
ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ, ಉಚಿತ ಲಸಿಕೆಗೆ ಆಗ್ರಹಿಸಿದ್ದರು. ನಂತರ ನಾವು ನಮ್ಮ ಶಾಸಕರ ನಿಧಿಯಿಂದ ಲಸಿಕೆ ನೀಡಲು ಅನುಮತಿ ಕೋರಿದ್ದೆವು. ಆದರೆ ಸರ್ಕಾರ ಅದನ್ನು ನಿರಾಕರಿಸಿದೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ಚಾಟಿ ಬೀಸಿದ ನಂತರ ಸರ್ಕಾರ ಮತ್ತಷ್ಟು ಎಚ್ಚೆತ್ತುಕೊಂಡಿದೆ. ಮಾಧ್ಯಮಗಳು ಜನರ ಪರವಾಗಿ ನಿಂತಿದ್ದು, ನ್ಯಾಯಾಲಯದ ಜತೆ ಮಾಧ್ಯಮಗಳಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.