ನವದೆಹಲಿ: ಸೋಮವಾರ ದೇಶದ ಜನತೆಗೆ ಕೊರೊನಾ ವ್ಯಾಕ್ಸಿನ್ ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನಿಗಳು ಘೋಷಣೆ ಮಾಡಿದ್ದರು. ಇದೀಗ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳು ನೀಡುವ ದರವನ್ನ ಕೇಂದ್ರ ಆರೋಗ್ಯ ಸಚಿವಾಲಯ ನಿಗದಿಪಡಿಸಿದೆ.

ಜಿಎಸ್‍ಟಿ ಅನ್ವಯ: ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆಯನ್ನ ಉತ್ಪಾದಕ ಕಂಪನಿಗಳೊಂದಿಗೆ ಖರೀದಿಸಬಹುದಾಗಿದೆ. ಕೋವ್ಯಾಕ್ಸಿನ್ ಪ್ರತಿ ಡೋಸ್ ಬೆಲೆ 1,410 ರೂ. ಮತ್ತು ಕೋವಿಶೀಲ್ಡ್ ಪ್ರತಿ ಡೋಸ್‍ಗೆ 780 ರೂ ಹಾಗೂ ಸ್ಪುಟ್ನಿಕ್-ವಿ 1,145 ರೂ. ಯನ್ನು ಫಿಕ್ಸ್ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಗಳು ಸೇವಾ ಶುಲ್ಕದ ರೂಪದಲ್ಲಿ 150 ರೂ. ಪಡೆಯಲಿವೆ. ಹಾಗೆಯೇ ಲಸಿಕೆ ಶೇ.5ರಷ್ಟು ಜಿಎಸ್‍ಟಿ ಸಹ ಅನ್ವಯವಾಗಲಿದೆ.

ಜೂನ್ 21ರಿಂದ ದೇಶದಲ್ಲಿ ಉಚಿತ ಲಸಿಕಾಭಿಯಾನ ಆರಂಭವಾಗಲಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಆರೋಗ್ಯ ಸಚಿವಾಲಯ, 74 ಕೋಟಿ ವ್ಯಾಕ್ಸಿನ್ ಖರೀದಿಗೆ ಮುಂದಾಗಿದ್ದೇವೆ. ಇದರಲ್ಲಿ 25 ಕೋಟಿ ಕೋವಿಶೀಲ್ಡ್ ಮತ್ತು 19 ಕೋಟಿ ಕೋವ್ಯಾಕ್ಸಿನ್ ಸಹ ಒಳಗೊಂಡಿದೆ. ಇದರೊಂದಿಗೆ ಇ-ಬಯೋಲಾಜಿಕಲ್ ಲಿಮಿಟೆಡ್ ಕಂಪನಿಯ 30 ಕೋಟಿ ಲಸಿಕೆಯನ್ನ ಕಾಯ್ದಿರಿಸಿದೆ. ಸರ್ಕಾರ ಈ ಕಂಪನಿಗಳಿಗೆ ಮುಂಗಡವಾಗಿ ಶೇ.30ರಷ್ಟು ಹಣವನ್ನು ಪಾವತಿಸಬೇಕಾಗಿದೆ.