ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದ್ದು, ಇದನ್ನು ಖಂಡಿಸಿ ರಾಜ್ಯದಲ್ಲಿ ಐದು ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ‘100 ನಾಟೌಟ್’ ಅಭಿಯಾನ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಡಿದ ಅವರು, ದೇಶದ ಇತಿಹಾಸದ ಪುಟಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ದಾಖಲೆಗಳನ್ನು ಮುರಿಯುತ್ತಿದೆ. ಪೆಟ್ರೋಲ್ ಬೆಲೆ ₹100 ಗಡಿ ದಾಟಿದೆ. ಈ ಹಿನ್ನಲೆ ಜೂನ್ 11ರಿಂದ 15 ರವರೆಗೂ ಐದು ದಿನಗಳ ಕಾಲ ಅಭಿಯಾನ ನಡೆಸಲಿದ್ದೇವೆ ಎಂದರು.

ಜೂನ್ 11 ರಂದು ಎಲ್ಲ ಜಿಲ್ಲಾ ಕೇಂದ್ರ, 12 ರಂದು ತಾಲೂಕು ಕೇಂದ್ರಗಲ್ಲಿ, 13 ರಂದು ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ, 14 ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೆಟ್ರೋಲ್ ಬಂಕ್ ಗಳಲ್ಲಿ, 15 ರಂದು ಪ್ರಮುಖ ಪೆಟ್ರೋಲ್ ಬಂಕ್ ಗಳಲ್ಲಿ, ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎಂಎಸ್ ಯುಐ, ರೈತ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಘಟಕ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯರು ಬೆಳಗ್ಗೆ 11 ರಿಂದ 12 ರವರೆಗೂ ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಲಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕೇಂದ್ರ ಸರ್ಕಾರ ಜನವರಿಯಲ್ಲಿ 16 ಬಾರಿ, ಫೆಬ್ರವರಿಯಲ್ಲಿ 16, ಮೇ ನಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ. ಚುನಾವಣೆ ನಡೆದ ಮಾರ್ಚ್, ಏಪ್ರಿಲ್ ನಲ್ಲಿ ಬೆಲೆ ಏರಿಕೆ ಮಾಡಲಿಲ್ಲ. ಕೇಂದ್ರ ಸರ್ಕಾರ ಈ ಬೆಲೆ ಏರಿಕೆಯಿಂದ ₹21.60 ಲಕ್ಷ ಕೋಟಿ ಹಣವನ್ನು ಸಂಪಾದಿಸಿದೆ. ಈ ವರ್ಷ ಒಟ್ಟು 48 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಆ ಮೂಲಕ ಜನರ ಜೇಬಿಗೆ ಕನ್ನ ಹಾಕಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೊರೊನಾ ಸಮಯದಲ್ಲಿ ಸರ್ಕಾರ ನಮ್ಮ ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ. ತೈಲ ಬೆಲೆ ಅನುಗುಣವಾಗಿ ಇಂಧನ ಬೆಲೆ ಇಳಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಡಿಕೆಶಿ ಒತ್ತಾಯಿಸಿದ್ದಾರೆ.