ನವದೆಹಲಿ: ಓರ್ವ ಹೆಚ್‍ಐವಿ ಸೋಂಕಿತ ಮಹಿಳೆಯ ದೇಹದಲ್ಲಿ ಮಹಾಮಾರಿ ಕೊರೊನಾ 216 ದಿನ ಜೀವಂತವಿದ್ದು, 30ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. 36 ವರ್ಷದ ಮಹಿಳೆ ದಕ್ಷಿಣ ಆಫ್ರಿಕಾದಲ್ಲಿರೋದು ಎಂದು ವರದಿಯಾಗಿದೆ.
2016ರಿಂದ ಮಹಿಳೆ ಹೆಚ್‍ಐವಿ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದ್ರೆ ಈಕೆಯ ದೇಹದಲ್ಲಿ ಸೇರಿರುವ ಕೊರೊನಾ ವೈರಸ್ ರೂಪಾಂತರಗೊಂಡಿರುವ ವಿಷಯ ತಿಳಿದು ತಜ್ಞರು ಸಹ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳವಂತಾಗಿದೆ.

ಕೊರೊನಾ ಸೋಂಕು ತಗುಲಿದ್ದು ಯಾವಾಗ?: 2020 ಸೆಪ್ಟೆಂಬರ್ ನಲ್ಲಿ ಮಹಿಳೆಗೆ ಸೋಂಕು ತಗುಲಿರೋದು ಗೊತ್ತಾಗುತ್ತೆ. ಮಹಿಳೆಯ ದೇಹದಲ್ಲಿ ಕೊರೊನಾ ವೈರಸ್ 13 ರೂಪಾಂತರಗಳು ಮತ್ತು 19 ಜೆನೆಟಿಕ್ ಬದಲಾವಣೆಗೊಂಡಿದೆ ಎಂದು ಸಂಶೋಧಕರು ಹೇಳುತ್ತಾರೆ. ಮೊದಲೇ ಹೆಚ್‍ಐವಿ ಸೋಂಕಿತೆಯಾದ ಕಾರಣ ಮಹಿಳೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೆಳಮಟ್ಟದಲ್ಲಿರುತ್ತೆ. ಆದ್ದರಿಂದ ಇಮ್ಯೂನಿಟಿ ಪವರ್ ಕಡಿಮೆ ಇರೋರನ್ನ ಕೊರೊನಾ ಸೋಂಕು ಹೆಚ್ಚು ಬಾಧಿಸಲಿದೆ. ಹಾಗಾಗಿಯೇ ಮಹಿಳೆಯ ದೇಹದಲ್ಲಿ ಕೊರೊನಾ ರೂಪಾಂತರಗೊಂಡಿರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಶೇ.25ರಷ್ಟು ಹೆಚ್‍ಐವಿ ಸೋಂಕಿತರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೆಚ್‍ಐವಿ ಸೋಂಕಿಗೆ ಕೊರೊನಾಗೆ ತುತ್ತಾದ್ರೆ ಅವರಿಂದ ಅದು ವೇಗವಾಗಿ ಬೇರೆಯೊಬ್ಬರಿಗೆ ಹರಡಬಹುದು. ಆದ್ರೆ ಎಲ್ಲ ಹೆಚ್‍ಐವಿ ಸೋಂಕಿತರ ದೇಹದಲ್ಲಿ ಇದೇ ರೀತಿ ಕೊರೊನಾ ರೂಪಾಂತರಗೊಳ್ಳುತ್ತಾ ಎಂಬುದರ ಬಗ್ಗೆ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ.