ಬೆಂಗಳೂರು : ನಗರದ ಬಿಬಿಎಂಪಿ ವ್ಯಾಪ್ತಿಯ ಕೊವೀಡ್ ಆಸ್ಪತ್ರೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ ಬಂಧಿಸಲಾಗಿದ್ದ ಡಾ.ರೆಹನ್ ಶಾಹೇದ್ ಅವರಿಗೆ ಜಾಮೀನು ದೊರೆತಿದೆ.
ಸೂಕ್ತ ಸಾಕ್ಷ್ಯ ಮತ್ತು ಪುರಾವೆಗಳನ್ನು ಪೊಲೀಸರು ಒದಗಿಸದ ಹಿನ್ನಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ನಗರ ಮತ್ತು ಸಿವಿಲ್ ಸೆಷನ್ಸ್ ನ್ಯಾಯಾಧೀಶ ಬಿ.ವೆಂಕಟೇಶ ಜಾಮೀನು ನೀಡಿದ್ದಾರೆ. ಡಾ. ರೆಹನ್ ಶಾಹೇದ್ ಜೊತೆಗೆ ಡಾಟಾ ಆಪರೇಟರ್ ಶಶಿಕುಮಾರ್ ಅವರಿಗೂ ಜಾಮೀನು ಮಂಜೂರಾಗಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತೀವ್ರ ಮುಜುಗರವಾಗಿದೆ.

ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್ ವಾರ್ ರೂಂ ನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಇದರ ಹಿಂದೆ ಸಮುದಾಯ ಒಂದರ ಕೈವಾಡ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಸೇರಿ ಮೂವರು ಶಾಸಕರು ಆರೋಪಿಸಿದ್ದರು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ವಾರ್ ರೂಂನಲ್ಲಿ ನೋಡಲ್ ಅಧಿಕಾರಿಯಾಗಿದ್ದ ಡಾ. ರೆಹನ್ ಶಾಹೇದ್ ಮತ್ತು ಡಾಟಾ ಆಪರೇಟರ್ ಶಶಿಕುಮಾರ್ ಅವರನ್ನು ಬೆಡ್ ಬ್ಲಾಕ್ ಮಾಡುತ್ತಿರುವ ಅನುಮಾನದ ಮೇಲೆ ಬಂಧಿಸಿದ್ದರು.
ವಿಚಾರಣೆ ವೇಳೆ ಬಿಜೆಪಿ ನಾಯಕರು ಮಾಡಿದ ಯಾವುದೇ ಆರೋಪಗಳಿಗೆ ಪೊಲೀಸರು ಪುರಾವೆಗಳನ್ನು ಒದಗಿಸರಲಿಲ್ಲ, ಬೆಡ್ ಬ್ಲಾಕ್ ಮಾಡಿರುವುದಕ್ಕೆ ಅಥಾವ ಈ ಇಬ್ಬರು ಆರೋಪಿಗಳು ಹಣ ಪಡೆದುಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಇರಲಿಲ್ಲ, ಅಲ್ಲದೇ ಇವರ ವಿರುದ್ಧ ಜನರಿಂದ ಯಾವುದೇ ದೂರುಗಳು ದಾಖಲಾಗದ ಹಿನ್ನಲೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರಾಜಕೀಯ ಒತ್ತಡದಿಂದ ಅಧಿಕಾರಿಗಳನ್ನು ಬಂಧಿಸಿದ ಪೋಲೀಸರಿಗೆ ನ್ಯಾಯಲಯದ ಆದೇಶದಿಂದ ತೀವ್ರ ಮುಜುಗರವಾಗಿದೆ.ಇನ್ನು ಪ್ರಕರಣ ಸಂಬಂಧಿಸಿದ ಸೆಕ್ಯೂಲರ್ ಟಿವಿ ಜೊತೆಗೆ ಮಾತನಾಡಿದ ಡಾ.ರೆಹನ್ ಅವರ ಕಾನೂನು ತಂಡದ ಸದಸ್ಯ ಶಾಹುಲ್ ಹಮೀದ್, ಪ್ರಕರಣದಲ್ಲಿ ಸ್ಪಷ್ಟವಾಗಿ ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ. ಪ್ರಕರಣವನ್ನು ರದ್ದುಗೊಳಿಸಲು ನಾವು ಶೀಘ್ರದಲ್ಲೇ ಹೈಕೋರ್ಟ್‌ಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.