ಬೆಂಗಳೂರು: ಜೂನ್ 7ರ ಬಳಿಕ ಅನ್‍ಲಾಕ್ ಮಾಡೋದರ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುಳಿವು ನೀಡಿದ್ದಾರೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬಂದ್ರೆ ಅನ್‍ಲಾಕ್ ಮಾಡಬಹುದು ಎಂದು ತಜ್ಞರು ವರದಿ ಸಲ್ಲಿಸಿದ್ದಾರೆ. ಅದೇ ರೀತಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಮತ್ತು 5 ಸಾವಿರಕ್ಕಿಂತ ಕಡಿಮೆ ಕೇಸ್ ಬಂದ್ರೆ ಲಾಕ್‍ಡೌನ್ ಸಡಿಲಿಕೆ ಮಾಡಬಹುದು ಎಂದು ತಜ್ಞರು ಶಿಫಾರಸ್ಸು ಮಾಡಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ಎರಡು ಸಭೆ ನಡೆಸಲಿದ್ದಾರೆ.
ಇತ್ತ ಬಿಎಂಟಿಸಿ ತನ್ನ ಎಲ್ಲ ಸಿಬ್ಬಂದಿಗೆ ಜೂನ್ 7ರಂದು ಕೆಲಸಕ್ಕೆ ಹಿಂದಿರುಗುವಂತೆ ಆದೇಶಿಸಿದೆ. ಸರ್ಕಾರದ ಆದೇಶದ ಪ್ರಕಾರ ಸಾರ್ವಜನಿಕರಿಗೆ ಸೇವೆ ನೀಡಬೇಕು. ಅನ್‍ಲಾಕ್ ಘೋಷಣೆಯಾದ್ರೆ ಬಸ್ ಗಳು ರಸ್ತೆಗೆ ಇಳಿಯಲಿದೆ. ಕೆಲಸಕ್ಕೆ ಗೈರಾಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಎಂಟಿಸಿ ಪ್ರಕಟನೆ ಹೊರಡಿಸಿದೆ. ಮೊದಲ ಹಂತದಲ್ಲಿ ಬಸ್ ಗಳು ಶೇ.50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ನಿನ್ನೆ ರಾಜ್ಯದಲ್ಲಿ 14,304 ಹೊಸ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ರೇಟ್ ಶೇ.12.30ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ 3,418 ಪ್ರಕರಣಗಳು ವರದಿಯಾಗಿವೆ. ಆದ್ರೆ ಕೆಲ ಜಿಲ್ಲೆಗಳಲ್ಲಿ ಸೋಂಕಿನ ಪಸರಿಸುವ ಪ್ರಮಾಣ ಕಡಿಮೆಯಾಗಿಲ್ಲ. ಹಾಗಾಗಿ ಪ್ರತಿ ಜಿಲ್ಲೆಯ ಪರಿಸ್ಥಿತಿ ನೋಡಿಕೊಂಡು ಆಯಾ ಜಿಲ್ಲಾಧಿಕಾರಿಗಲೇ ಅನ್‍ಲಾಕ್ ಮಾರ್ಗಸೂಚಿ ಪ್ರಕಟಿಸುವ ಬಗ್ಗೆ ಸಾಧ್ಯತೆಗಳಿವೆ.