ಬೆಂಗಳೂರು: ಕೇಂದ್ರ ಸರ್ಕಾರ ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಬೆನ್ನಲ್ಲೇ ರಾಜ್ಯದಲ್ಲಿಯೂ ಅದೇ ಮಾದರಿ ಬಳಕೆಯಾಗುತ್ತಾ ಅನ್ನೋದರ ಬಗ್ಗೆ ಗೊಂದಲ ಮೂಡಿದೆ. ಆದ್ರೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ತಜ್ಞರು, ಆರೋಗ್ಯ ಅಧಿಕಾರಿಗಳು ಮತ್ತು ಪೋಷಕರ ಜೊತೆ ಸಭೆ ನಡೆಸುತ್ತೇನೆ. ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ ಹಿನ್ನೆಲೆ ರಾಜ್ಯ ಸರ್ಕಾರ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನು ಮುಂದೂಡಿದೆ. ಆದ್ರೆ ಇದುವರೆಗೂ ದಿನಾಂಕ ಪ್ರಕಟಿಸಿಲ್ಲ. ಹಾಗಾಗಿ ರಾಜ್ಯವೂ ಕೇಂದ್ರದಂತೆ ಪರೀಕ್ಷೆ ರದ್ದುಗೊಳಿಸುತ್ತಾ ಅನ್ನೋ ಅನುಮಾನ ಮೂಡಿದೆ. ಇದೇ ವಿಷಯವಾಗಿ ಪೋಷಕರು ಮತ್ತು ಮಕ್ಕಳು ಸಹ ಚಿಂತೆಯಲ್ಲಿದ್ದಾರೆ.
ಪರೀಕ್ಷೆ ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಫಲಿತಾಂಶ ನೀಡುವ ಬಗ್ಗೆ ವಿವರವಾಗಿ ಹೇಳಿಲ್ಲ. 9, 10 ಮತ್ತು 11ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕ ಮತ್ತು ಈ ವರ್ಷದ ಆಂತರಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ 12ನೇ ಕ್ಲಾಸ್ ಫಲಿತಾಂಶ ಪ್ರಕಟಿಸಬಹುದು. ಕೇವಲ 12ನೇ ತರಗತಿಯ ಆಂತರಿಕ ಪರೀಕ್ಷೆ ಫಲಿತಾಂಶ ಗಣನೆಗೆ ತೆಗೆದುಕೊಳ್ಳಲೂಬಹುದು.