✍️ ಮಹೇಶ್ ಸೋಸ್ಲೆ
ರಾಜ್ಯ ಸರ್ಕಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬ್ರಾಹ್ಮಣರಿಗೆ ಮಾತ್ರ ಪ್ರತ್ಯೇಕ ಲಸಿಕಾ ಶಿಬಿರವನ್ನು ಆರಂಭಿಸುವ ಮೂಲಕ ಕಾನೂನಿನ ಮುಂದೆ ಎಲ್ಲರೂ ಸಮಾನರು(ವಿಧಿ14) ಎಂಬ ಧ್ಯೇಯಕ್ಕೆ ತಿಲಾಂಜಲಿ ಇಟ್ಟು ಬಹಿರಂಗ ಅಸ್ಪೃಶ್ಯತಾ ಆಚರಣೆ ಮಾಡಿದೆ. ಕೊರೋನಾ ಮೊದಲ ಅಲೆಯ ಸಂಧರ್ಭದಲ್ಲಿ ವಾರಿಯರ್ಸ್ ಎಂದು ಚಪ್ಪಾಳೆ ತಟ್ಟಿ,ಹೂ ಸುರಿದದ್ದು ಬಿಟ್ಟರೆ ಇವರಿಗಾಗಿ ಸರ್ಕಾರ ಅಂತದೇನು ಹೇಳಿಕೊಳ್ಳುವುದನ್ನು ಮಾಡಲೆ ಇಲ್ಲ.ಅದಿರಲಿ ಇಂದು ತೀವ್ರವಾಗಿ ಬಾಧಿಸುತ್ತಿರುವ ಎರಡನೇ ಅಲೆಯಲ್ಲಿಯು ಅದೇ ಕೊರೋನ ವಾರಿಯರ್ಸ್ ಸರ್ಕಾರದ ಆಜ್ಞೆಯನ್ನು ಶಿರಸಾವಹಿಸಿ ಕೆಲಸಲ ಬಂಧು ಬಳಗವನ್ನು,ಅನೇಕ ಕಡೆ ತಮ್ಮದೇ ಮನೆಯವರನ್ನು ಕಳೆದುಕೊಂಡರು ಅಶ್ರುತರ್ಪಣವನ್ನಷ್ಟೇ ಸಲ್ಲಿಸಿ ಮತ್ತೆ ನಾಳೆಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ಎದೆಗುಂದದೆ ಸೇವೆ ಸಲ್ಲಿಸುತ್ತಿದ್ದಾರೆ (ವಿಶೇಷವಾಗಿ ವೈದ್ಯಕೀಯ ಸಿಬ್ಬಂದಿ ಹಾಗೂ ಪೋಲೀಸರು).ಇನ್ನು ಪೌರ ಕಾರ್ಮಿಕರು ರೈತರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸರ್ಕಾರದ ವಿವಿಧ ಇಲಾಖಾ ಸಿಬ್ಬಂಧಿಗಳಿಗೆ ಇಂತಹ ಅನೇಕ ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಇನ್ನೂ ಲಸಿಕೆ ಸಮರ್ಪಕವಾಗಿ ವಿತರಣೆಯಾಗಿಲ್ಲ. ಜೊತೆಗೆ 45 ವರ್ಷ ಮೇಲ್ಪಟ್ಟವರಿಗೂ ಸಹ ಲಸಿಕೆ ಅಭಾವದಿಂದ ಈ ಕಾರ್ಯವು ಕುಂಟುತ್ತಾ ಸಾಗಿ ಜನಸಾಮಾನ್ಯರ ದುಗುಡ ದುಪ್ಪಟ್ಟಾಗಿದೆ.

ವಾಸ್ತವ ಹೀಗಿದ್ದರು, ಕೆಲದಿನಗಳ ಹಿಂದೆ ದೇವಾಲಯದ ಅರ್ಚಕರಿಗೆ ವಿಮಾ ಸೌಲಭ್ಯವನ್ನು ಜಾರಿಗೊಳಿಸಿದ್ದ ಸರ್ಕಾರ ಈಗಿನ ವಿಶೇಷ ಪ್ಯಾಕೇಜಿನಲ್ಲಿ ಅವರಿಗೆ ಸಹಾಯಧನವನ್ನು ಘೋಷಿಸಿತು ಇದನ್ನು ಅತ್ತಬಿಡಿ, ಇಲ್ಲಿ ತಕರಾರಿನ ವಿಷಯವೇನೆಂದರೆ ಲಾಕ್ ಡೌನ್ ನಿಂದ ದೇವಾಲಯಗಳಿಗೆ ಬಾಗಿಲೆಳೆದು ತಿಂಗಳು ಉರುಳಿದೆ ಇಂತಾ ಲಸಿಕಾ ಅಭಾವದ ಸಂದರ್ಭದಲ್ಲಿ ಈ ಸಮುದಾಯದ ಅದಾವ ಕೆಲಸವನ್ನು ಅತ್ಯವಶ್ಯಕ ಸೇವಾ ಕ್ಷೇತ್ರವೆಂದು ಪರಿಗಣಿಸಿ ಇವರಿಗೆ ಮಾತ್ರ ಪ್ರತ್ಯೇಕ ಲಸಿಕಾ ಅಭಿಯಾನವನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರು ಮೇಲಾಗಿ ಖುದ್ದು ವೈಧ್ಯರಾಗಿರುವ ಡಾ. ಅಶ್ವತ್ ನಾರಾಯಣ್ ಅವರು ಚಾಲನೆ ನೀಡಿದರೊ ತಿಳಿಯದು.ಟಾಸ್ಕ್ ಪೊರ್ಸ್ ನಲ್ಲಿ ಒಂದಷ್ಟು ಒಳ್ಗೆ ಕೆಲಸ ಮಾಡಿದ್ದ ಇವರ ನಡೆ ಖಂಡನೀಯ. ಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಮೂಲಕ ಸ್ವತಃ ಶೂದ್ರ ವ್ಯಕ್ತಿಯೊಬ್ಬ ಜೀವ ವಿರೋಧಿ ಮತ್ತು ಸಮಾನತೆಯ ವಿರೋಧಿ ವರ್ಣಾಶ್ರಮ ಪದ್ಧತಿಯನ್ನು ಮತ್ತೆ ಜಾರಿಗೊಳಿಸಲೊರಟಿರುವುದು ದುರ್ದೈವದ ಸಂಗತಿ.

‘ಹಿಂದೂ ನಾವೆಲ್ಲ ಒಂದು’ ಎಂದೇಳುವ ಅಧಿಕಾರ ರಾಜಕಾರಣದ ಘೋಷ ವಾಕ್ಯದ ಒಳ ಮರ್ಮ ಅರಿಯದೆ ಅನ್ಯಧರ್ಮಿಯರ ವಿರುದ್ಧ ಕಾಲು ಕೆರೆದು ಯುದ್ಧಕ್ಕೆ ನಿಲ್ಲುವ ಹಾಗೂ ಬ್ರಾಹ್ಮಣ್ಯಕ್ಕೆ ಗುರಾಣಿಗಳಾಗಿ ಬಳಕೆಯಾಗುತ್ತಿರುವ ನಮ್ಮ ಹಿಂದುಳಿದ ದಲಿತ ಆದಿವಾಸಿ ಕಾಲಾಳುಗಳು ಇಂದು ತಮ್ಮ ತಮ್ಮ ಮನೆಯವರಿಗೆ ಲಸಿಕೆ ಸಿಗದೆ ಹೌಹಾರುತ್ತಿರುವುದನ್ನು ಕಂಡರೆ ನನಗೆ ಅಯ್ಯೋ.. ಎನ್ನುವಷ್ಟು ಕನಿಕರವಾಗುತ್ತಿದೆ.