ನವದೆಹಲಿ: ಕೊರೊನಾ ಮಾರಿ ಅರ್ಥವ್ಯವಸ್ಥೆಯ ಬೆನ್ನಮೂಳೆಯನ್ನೇ ಮುರಿದು ಹಾಕಿದೆ. ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಕೊರೊನಾ ಎರಡನೇ ಅಲೆ ದೇಶದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನರ ಉದ್ಯೋಗವನ್ನು ಕಿತ್ತುಕೊಂಡಿದೆ. ಕೊರೊನಾ ಆರಂಭದಿಂದ ಇಂದಿನವರೆಗೆ ಜನರ ಆದಾಯ ಶೇ.97ರಷ್ಟು ಇಳಿಕೆಯಾಗಿದೆ
ಸೆಂಟರ್ ಫಾರ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಕೆಲ ಅಂಕಿಅಂಶಗಳನ್ನು ಬಹಿರಂಗಗೊಳಿಸಿದ್ದಾರೆ. ಮೇನಲ್ಲಿ ನಿರುದ್ಯೋಗದ ಪ್ರಮಾಣ ಶೇ.12ರವರೆಗೆಗೆ ತಲುಪಿದೆ. ಏಪ್ರಿಲ್ ನಲ್ಲಿ ನಿರುದ್ಯೂಗ ಪ್ರಮಾಣ ಶೇ.8ರಷ್ಟಿತ್ತು.

ಶೇ.12ರಷ್ಟು ಅಂದ್ರೆ ಸುಮಾರು ಒಂದು ಕೋಟಿಗೂ ಅಧಿಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಕೊರೊನಾ ವೈರಸ್ ಎರಡನೇ ಅಲೆ. ಆರ್ಥಿಕ ಚಟುವಟಿಕೆಗಳು ಪುನಾರರಂಭಗೊಳ್ಳುತ್ತಿದ್ದಂತೆ ಈ ಪ್ರಮಾಣ ಮಂದಗತಿಯಲ್ಲಿ ಇಳಿಕೆ ಆಗಲಿದೆ ಎಂದು ಮಹೇಶ್ ವ್ಯಾಸ್ ಹೇಳುತ್ತಾರೆ.
ಈ ಬಾರಿ ನಿರುದ್ಯೋಗಿಗಳಾದವರು ಮತ್ತೆ ಕೆಲಸ ಪಡೆಯುವುದು ಕಷ್ಟವಾಗಲಿದೆ. ಇನ್ ಫಾರ್ಮಲ್ ಸೆಕ್ಟರ್ ರಿಕವರಿ ನಿಧಾನವಾಗಿ ಮೊದಲಿನ ಸ್ಥಿತಿಗೆ ಹಿಂದಿರುಗುತ್ತಿದೆ. ಆದ್ರೆ ಫಾರ್ಮಲ್ ಸೆಕ್ಟರ್ ನಲ್ಲಿ ಉದ್ಯೋಗಿಗಳನ್ನ ತೆಗೆದುಕೊಳ್ಳುವ ಪ್ರಕ್ರಿಯೆ ಇಲ್ಲಿಯವರೆಗೂ ಆರಂಭಗೊಂಡಿಲ್ಲ.

ಮೇ 2020ರಲ್ಲಿ ನಿರುದ್ಯೋಗ ಪ್ರಮಾಣ ಶೇ.23.5ರಷ್ಟು ದಾಖಲಾಗಿತ್ತು. ಅಂದು ಇಡೀ ದೇಶವೇ ಲಾಕ್‍ಡೌನ್‍ಗೆ ಒಳಪಟ್ಟಿತ್ತು. ಆದ್ರೆ ಈ ಬಾರಿ ರಾಜ್ಯಗಳು ಹಂತ ಹಂತವಾಗಿ ಕಠಿಣ ನಿಯಮಗಳನ್ನು ವಿಧಿಸಲು ಆರಂಭಿಸಿತು. ಲಾಕ್‍ಡೌನ್ ಘೋಷಣೆಯಾದರೂ ಕೆಲ ರಿಯಾಯ್ತಿಗಳನ್ನ ನೀಡಲಾಗಿದೆ. ಆದ್ರೂ ಬಹುತೇಕ ರಾಜ್ಯಗಳಲ್ಲಿ ಲಾಕ್‍ಡೌನ್ ಪರಿಸ್ಥಿತಿ ಇದೆ.

ನಿರುದ್ಯೋಗ ಪ್ರಮಾಣ ಶೇ.3 ಅಥವಾ ಶೇ.4ರಷ್ಟಿದ್ರೆ ಅದನ್ನ ಭಾರತದ ಅರ್ಥ ವ್ಯವಸ್ಥೆಯಲ್ಲಿ ನಾರ್ಮಲ್ ಎಂದು ಹೇಳಬಹುದು. ಸಿಎಂಐಇ ಅಂದಾಜು 17.5 ಲಕ್ಷ ಕುಟುಂಬಗಳನ್ನು ಸಮೀಕ್ಷೆ ಮಾಡಿದೆ. ಈ ಎಲ್ಲ ಕುಟುಂಬಗಳ ಆದಾಯದ ಬಗ್ಗೆ ಮಾಹಿತಿ ಕಲೆ ಹಾಕಿದೆ. ಕೊರೊನಾ ಕಾಲದಲ್ಲಿ ಬಹುತೇಕ ಕುಟುಂಬಗಳ ಆದಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರೋದು ಸಮೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಮಹೇಶ್ ವ್ಯಾಸ್ ಹೇಳುತ್ತಾರೆ.
ಸಿಎಂಐಇ ಅಂಕಿ ಅಂಶಗಳು
- ಕೊರೊನಾದಲ್ಲಿಯ ನಿರುದ್ಯೋಗ: 1 ಕೋಟಿಗೂ ಅಧಿಕ
- ನಗರ ಭಾಗದ ನಿರುದ್ಯೋಗ (ಮೇ): ಶೇ.14.73
- ಗ್ರಾಮೀಣ ಭಾಗದ ನಿರುದ್ಯೋಗ (ಮೇ): ಶೇ.10.36
- ದೇಶದ ಒಟ್ಟಾರೆ ನಿರುದ್ಯೋಗ ಪ್ರಮಾಣ: (ಮೇ): ಶೇ.11.90

ಕಳೆದ ವರ್ಷ ಕೊರೊನಾ ಸ್ಫೋಟಗೊಳ್ಳುವ ಮುನ್ನವೇ ಭಾರತದ ನಿವ್ವಳ ಉತ್ಪನ್ನ ದರ ಅಂದ್ರೆ ಜಿಡಿಪಿ ಮಂದಗತಿಯಲ್ಲಿತ್ತು. ಏಪ್ರಿಲ್ 2020ರಿಂದ ಮಾರ್ಚ್ 2021ರವರೆಗೆ ಹಣಕಾಸು ಅವಧಿಯಲ್ಲಿ ಜಿಡಿಪಿ ಶೇ.6.3ರಷ್ಟು ಕುಸಿತವಾಗಿತ್ತು. 2019-20ರಲ್ಲಿ ಜಿಡಿಪಿ ಅತಿ ಕಡಿಮೆ ಅಂದ್ರೆ ಕೇವಲ ಶೇ.4ರಷ್ಟು ಮಾತ್ರ ಬೆಳವಣಿಗೆ ಕಂಡಿತ್ತು. ಈ ವರ್ಷದ ಜಿಡಿಪಿ ದರ ಕೇಂದ್ರ ಪ್ರಕಟಿಸಿದ್ದು, ಕೊರೊನಾ ಎರಡನೇ ಅಲೆ ಪರಿಣಾಮ ಶೇ.7.3ರಷ್ಟು ಕುಸಿತವಾಗಿದೆ.

ಭಾರತದ ನೈಜ ಜಿಡಿಪಿ 2020ರ ಮಾರ್ಚ್ ಅಂತ್ಯದ ವೇಳೆಗೆ 145 ಲಕ್ಷ ಕೋಟಿ ರೂ.ಗಳಿಂದ 2020-21ರ ಮಾರ್ಚ್ ಅಂತ್ಯಕ್ಕೆ 135 ಲಕ್ಷ ಕೋಟಿ ರೂ.ಗೆ ಕುಸಿತ ಕಂಡಿದೆ. ಇನ್ನು 145 ಲಕ್ಷ ಕೋಟಿ ರೂ.ಗಳ ಗಾತ್ರವನ್ನು ಮರಳಿ ಪಡೆಯಲು, ಪ್ರಸಕ್ತ 2021-22ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ 10-11ರಷ್ಟು ಏರಿಕೆಯಾಗಬೇಕಿದೆ.