ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ 18 ವರ್ಷ ವಯಸ್ಸಿನ ಮೇಲ್ಪಟ್ಟ 15,000 ಕಲಾವಿದರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದ ಡಿಸಿಎಂ ಅಶ್ವಥ್ ನಾರಾಯಣ, ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ಸೇರಿ ಆಹಾರ ಧಾನ್ಯ ನೀಡಲು ಸರಕಾರ ತಯಾರಿದೆ ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವೆ ಎಂದರು.

ಮುಖ್ಯಮಂತ್ರಿಗಳ ಗೃಹ ನಿರ್ಮಾಣ ಯೋಜನೆ ಅಡಿಯಲ್ಲಿ ಬಡ ಕಲಾವಿದರಿಗೆ ರಿಯಾಯಿತಿ ಬೆಲೆಯಲ್ಲಿ ಮನೆ ನೀಡುವ ಬಗ್ಗೆಯೂ ಸರಕಾರ ಉದ್ದೇಶಿಸಿದೆ. ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದ್ದು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಿಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.
ನಮ್ಮ ನಾಡಿನ ಕಲೆ ಸಂಸ್ಕೃತಿ ರಕ್ಷಣೆಯಲ್ಲಿ ಕಲಾವಿದರ ಪಾತ್ರ ದೊಡ್ಡದು. ಇವರು ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಹೀಗಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕುವುದನ್ನು ಸರಕಾರ ಇಷ್ಟಪಡುವುದಿಲ್ಲ. ಮೊದಲ ಅಲೆಯ ಕಾಲದಲ್ಲೂ ಚಿತ್ರರಂಗದ ನೆರವಿಗೆ ಸರಕಾರ ಧಾವಿಸಿತ್ತು. ಈಗಲೂ ನೆರವಿಗೆ ಬರಲಿದೆ. ಯಾವ ಕಾರಣಕ್ಕೂ ಸಿನಿಮಾ ರಂಗ ಕಷ್ಟಕ್ಕೆ ಸಿಲಿಕಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಇದೇ ವೇಳೆ ಸಂಸದೆ ಸುಮಲತಾ ಅಂಬರೀಶ್, ಕಲಾವಿದರ ಸಂಘದ ಅಧ್ಯಕ್ಷ ರಾಕ್‌ಲೈನ್ ವೆಂಕಟೇಶ್, ಹಿರಿಯ ಕಲಾವಿದ ದೊಡ್ಡಣ್ಣ ಅವರು ಕಲಾವಿದರ ಸಮಸ್ಯೆಗಳ ಬಗ್ಗೆ ಡಿಸಿಎಂ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಚಿತ್ರರಂಗದ ಅನೇಕರು ಇದ್ದರು.