ಚಿಕ್ಕಮಗಳೂರು : ಅಪಘಾತದಿಂದ ಕೊರೊನಾ ವಾರಿಯರ್ ಒಬ್ಬರು ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು ಸ್ಥಳೀಯ ಬಿಜೆಪಿ ಶಾಸಕ ಡಿ.ಎಸ್ ಸುರೇಶ್ ನೆರವಿಗೆ ಬಂದು ಸಹಾಯ ಮಾಡಲಿಲ್ಲ ಎನ್ನುವ ಆರೋಪವೊಂದು ಕೇಳಿ ಬಂದಿದೆ.
ಹಿರಿಯ ಆರೋಗ್ಯಾಧಿಕಾರಿ ಡಾ.ರಮೇಶ್ ಕುಮಾರ್, ಕೊರೊನಾ ಕರ್ತವ್ಯ ಮುಗಿಸಿ ವಾಪಸಾಗುವ ವೇಳೆ ಲಕ್ಕವಳ್ಳಿ ಕ್ರಾಸ್ ನಲ್ಲಿ ಅವರ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು.
ಅಪಘಾತದಲ್ಲಿ ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಆರೋಗ್ಯಾಧಿಕಾರಿ ಡಾ.ರಮೇಶ ಕುಮಾರ್ ಬಿದ್ದು ಒದ್ದಾಡುತ್ತಿದ್ದರು. ಈ ಸಂದರ್ಭದಲ್ಲಿ ಇದೇ ಮಾರ್ಗವಾಗಿ ತರೀಕೆರೆ ಬಿಜೆಪಿ ಶಾಸಕ ಡಿ.ಎಸ್ ಸುರೇಶ್ ಕೂಡಾ ಪ್ರಯಾಣ ಬೆಳೆಸಿದ್ದರು. ಅಪಘಾತ ನೋಡಿ ಕಾರು ನಿಲ್ಲಿಸಿದ್ದ ಶಾಸಕರು ಅಪಘಾತಕ್ಕೆ ಒಳಗಾದ ವೈದ್ಯನನ್ನ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಲಿಲ್ಲ ಎನ್ನುವ ಆರೋಪ ಸ್ಥಳೀಯರು ಮಾಡುತ್ತಿದ್ದಾರೆ.
ಹತ್ತು ನಿಮಿಷಗಳ ಕಾಲ ಅಲ್ಲೆ ನಿಂತು ಗನ್ ಮ್ಯಾನ್ ಮೂಲಕ ಮಾಹಿತಿ ಪಡೆದ ಶಾಸಕ ಸುರೇಶ್, ಅಮಾನವೀಯ ವರ್ತಿಸಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ಅರ್ಧ ಗಂಟೆಗಳ ಒದ್ದಾಡಿ ಡಾ. ರಮೇಶ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ವೈರಲ್ ಕೂಡಾ ಆಗಿದ್ದು, ಇದರಲ್ಲಿ ಸ್ಥಳೀಯರು ಶಾಸಕ ಡಿ.ಎಸ್ ಸುರೇಶ್ ಅಮಾನವೀಯ ವರ್ತನೆಯನ್ನು ಖಂಡಿಸಿದ್ದಾರೆ