ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇತ್ತಿಚೆಗೆ ಕೊರೊನಾದಿಂದ ಗುಣಮುಖವಾಗಿದ್ದ ಅವರು ಇಂದು ಹೃದಯಾಘಾತದಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶತಾಯುಷಿ ಹೆಚ್.ಎಸ್ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟದ ಬಳಿಕ ಸಾಮಾಜಿಕ ಕಾರ್ಯಕರ್ತರಾಗಿ ಬದಲಾಗಿದ್ದರು. ಪತ್ರಕರ್ತರಾಗಿ ಸಾಮಾಜಿಕ ಹೋರಾಟಗಾರರಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಪಕ್ಷ ಭೇಧವಿಲ್ಲದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ 104ರ ಹರೆಯದಲ್ಲೂ ಎಲ್ಲರಿಗೂ ಮಾದರಿಯಾಗಿದ್ದರು.

ಇಳಿ ವಯಸ್ಸಿಲ್ಲೂ ಪ್ರತಿಭಟನೆ ನಡೆಸುತ್ತಿದ್ದು ಹೆಚ್.ಎಸ್ ದೊರೆಸ್ವಾಮಿ ಅವರ ಹೋರಾಟದ ಬದುಕು ಸಾಕಷ್ಟು ರೋಚಕವಾಗಿದೆ. ಮಹಾತ್ಮಾ ಗಾಂಧಿಯಿಂದ ಪ್ರೇರಣೆ ಪಡೆದ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜೈಲು ಸೇರಿದ್ದರು.

ಎಚ್.ಎಸ್.ದೊರೆಸ್ವಾಮಿ ಅವರು ಏಪ್ರಿಲ್ 10, 1918ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ಮಹಾತ್ಮ ಗಾಂಧಿಯ “ಮೈ ಅರ್ಲಿ ಲೈಫ್” ಪುಸ್ತಕವನ್ನು ಓದಿ ಪ್ರೇರಣೆಗೊಂಡರು. ಆ ಬಳಿಕ ಅವರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಸೇರಲು ತಿರ್ಮಾನಿಸಿದರು. ಬೆಂಗಳೂರಿನ ಕಬ್ಬನ್ ಪೇಟೆ ಬಳಿ ಬನಪ್ಪ ಬೃಂದಾವನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಜಾಗೃತಿ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ಭಾಗಿಯಾಗಿದ್ದರು. ಅಲ್ಲಿ ಭಾಗಿಯಾದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆ ಮಾಡಿದ್ದರು. ಈ ವೇಳೆ ದೊರೆಸ್ವಾಮಿ ಮೊದಲ ಬಾರಿ ಬಂಧನವಾಗಿದ್ದರು. ಇದಾದ ಮರು ದಿನವೇ ವಿದ್ಯಾರ್ಥಿಗಳು ಮುಷ್ಕರ ಕರೆಯುವ ಮೂಲಕ ಅವರು ಅಧಿಕೃತವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

1942 ರ ಹೊತ್ತಿಗೆ, ದೊರೆಸ್ವಾಮಿ ಅವರು ತಮ್ಮ ಬಿ.ಎಸ್.ಸಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಉಪನ್ಯಾಸಕರಾಗಿ ಕಾಲೇಜಿನಲ್ಲಿ ಸೇರಿಕೊಂಡರು. ಅದೇ ವರ್ಷ ಆಗಸ್ಟ್ ನಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳುವಳಿಯಲ್ಲಿ ಅವರು ಭಾಗಿಯಾದರು.
ಅವರ ಈ ಹೋರಾಟದಲ್ಲಿ ಅವರ ಹಿರಿಯ ಸಹೋದರ ಎಚ್.ಎಸ್. ಸೀತಾರಾಮ್, ಸರ್‍ದಾರ್ ವೆಂಕಟರಾಮಯ್ಯ, ಏ.ಜಿ. ರಾಮಚಂದ್ರರಾವ್ ಮುಂತಾದವರು ಮಾರ್ಗದರ್ಶಕರಾಗಿದ್ದರು. ಪತ್ರಕರ್ತರಾಗಿಯೂ ದೊರೆಸ್ವಾಮಿ ಅವರು ಕಾರ್ಯನಿರ್ವಹಿಸಿ, ಬ್ರಿಟಿಷರ ವಿರುದ್ಧ ತಮ್ಮ ಪತ್ರಿಕೆಯನ್ನು ಒಂದು ಪ್ರಬಲ ಅಸ್ತ್ರವಾಗಿ ಉಪಯೋಗಿಸಿಕೊಂಡರು.
ಹೋರಾಟ ಸಂಧರ್ಭದಲ್ಲಿ ದೊರೆಸ್ವಾಮಿ ಅವರು ಟೈಮ್ ಬಾಂಬ್ ಸರಬರಾಜು ಮಾಡುತ್ತಿದ್ದರು. ಈ ಟೈಮ್ ಬಾಂಬಿನಿಂದ ಜೀವಹಾನಿ ಆಗುತ್ತಿರಲಿಲ್ಲ ಆದರೆ ಈ ಟೈಮ್ ಬಾಂಬ್ ಅನ್ನು ಇಲಿಗಳ ಬಾಲಕ್ಕೆ ಕಟ್ಟಿ ದಾಖಲೆಗಳನ್ನು ನಾಶಪಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ತೂರಿಬಿಡುತ್ತಿದ್ದರು. ಈ ಸಂಧರ್ಭದಲ್ಲಿ ಒಮ್ಮೆ ಪೋಲೀಸರ ಕೈಗೆ ಸಿಕ್ಕು ೧೪ ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದರು.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗಿಯಾಗಿದ್ದ ದೊರೆಸ್ವಾಮಿ ಅವರು, ಮುಂದೆ ಇಂದಿರಾಗಾಂಧಿ ಕಾಲದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದರು.

ಕಳೆದ ದಶಕದಲ್ಲಿ ಲಕ್ಷಾಂತರ ಎಕರೆ ಭೂಮಿ, ಭೂಗಳ್ಳರ ಹಗರಣಕ್ಕೆ ಸಿಲುಕಿಹೊಗುವುದನ್ನು ಹೋರಾಡಿ ತಪ್ಪಿಸಿದ್ದಾರೆ. ಹಳ್ಳಿಗಳನ್ನು ಕಸದ ಕೊಂಪೆಗಳನ್ನು ಮಾಡಿ ಕಸದ ಪರ್ವತ ರಾಶಿಗಳಿಂದ ತುಂಬಿ, ಸುತ್ತಮುತ್ತಲಿನ ಜನ ಊಹಿಸಿಕೊಳ್ಳಲಾಗದ ನರಕದ ಬಾಳನ್ನು ಅನುಭವಿಸಬೇಕಾಗಿದ್ದ ಅನಿವಾರ್ಯ ಸಂದರ್ಭದಲ್ಲಿ, ತಾವೇ ಅಲ್ಲಿನ ಜನರ ನೇತೃತ್ವ ವಹಿಸಿ ಬೆಳೆಯುತ್ತಿದ್ದ ಕಸದರಾಶಿಗೆ ಇಂದು ತಡೆ ಉಂಟಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.