ಬೆಂಗಳೂರು: ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಹರಡಿದೆ ಎಂಬ ಆರೋಪವನ್ನು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಮಾಡಿದೆ. ಕೋವಿಡ್19 ಕುರಿತು ಚೀನಾ ಅಧಿಕೃತವಾಗಿ ಬಹಿರಂಗಪಡಿಸುವ ಕೆಲ ತಿಂಗಳ ಮೊದಲೇ ಚೀನಾದ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅಮೆರಿಕದ ಗುಪ್ತಚರ ಮಾಹಿತಿ ಆಧರಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಸಂಶೋಧಕರು ಆನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ ಸಮಯ ಹಾಗೂ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿದ ವಿವರಗಳನ್ನು ಆಧರಿಸಿ ಈ ಆರೋಪ ಮಾಡಲಾಗಿದೆ.ಈ ವರದಿಯು ಚೀನಾದಲ್ಲಿ ಎಷ್ಟು ಸಂಶೋಧಕರು ಕೋವಿಡ್ ಸೋಂಕಿಗೆ ಒಳಗಾಗಿದ್ದರು ಎಂಬ ಕುರಿತ ಹೊಸ ವಿವರಗಳನ್ನು ಸಹ ಒದಗಿಸುತ್ತಿದೆ. ಈ ಅಂಶಗಳನ್ನ ಪರಿಗಣಿಸಿದಾಗ ಕೋವಿಡ್ ವೈರಾಣು ವುಹಾನ್ ಪ್ರಯೋಗಾಲಯದಿಂದಲೇ ಹಬ್ಬಿರುವ ಸಾಧ್ಯತೆಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮತ್ತಷ್ಟು ಒತ್ತಾಯ ಕೇಳಿಬಂದಿದೆ.
A trip by mountain bike to a disused mine in China. Questions from the police. We dig into the hypothesis that Covid escaped from a Wuhan lab. https://t.co/Im2fjl7sG0
— The Wall Street Journal (@WSJ) May 25, 2021
ಈ ವರದಿ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರರು ನಿರಾಕರಿಸಿದ್ದಾರೆ. ಆದರೆ, ಕೊರೊನಾ ವೈರಸ್ ಪ್ರಾರಂಭಿಕ ದಿನಗಳು ಮತ್ತು ಖಾಯಿಲೆ ಹುಟ್ಟಿಕೊಂಡಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆಗಳನ್ನು ಅಮೆರಿಕ ಕೇಳುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಮೂಲಕ ಸಾಂಕ್ರಾಮಿಕ ಮೂಲವನ್ನು ಪತ್ತೆ ಮಾಡುವ ಕಾರ್ಯಕೈಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸದಸ್ಯ ದೇಶಗಳ ತಜ್ಞರ ತಂಡಗಳಿಗೆ ಅಮೆರಿಕ ಬೆಂಬಲ ನೀಡುತ್ತದೆ. ಈ ಬೆಂಬಲ ರಾಜಕೀಯದ ಹೊರತಾಗಿದೆ ಎಂದು ಹೇಳಿದ್ದಾರೆ.
ಚೀನಾದ ಮೇಲಿನ ಈ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯ, ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋಂಕು ಹರಡಿರುವ ಸಾಧ್ಯತೆ ಇಲ್ಲ ಎಂದು ಈಗಾಗಲೇ ಡಬ್ಲ್ಯುಎಚ್‌ಒ ವರದಿ ನೀಡಿದೆ. ಆರರೂ ಅಮೆರಿಕದ ಅನುಮಾನ ಪರಿಹಾರವಾಗಿಲ್ಲ. ಕೊರೊನಾ ವೈರಸ್ ಪ್ರಯೋಗಾಲಯದಿಂದ ಸೋರಿಕೆ ಆಗಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ಟ್ರಂಪ್ ಸರ್ಕಾರವೂ ಕೂಡ ಕೊರೊನಾ ವೈರಸ್ ಪ್ರಪಂಚದಾದ್ಯಂತ ಹಬ್ಬಲು ಚೀನಾವೇ ಕಾರಣ ಎಂದು ಗಂಭೀರ ಆರೋಪಗಳನ್ನು ಮಾಡಿತ್ತು.