ನವದೆಹಲಿ : ‘ಅಲೋಪತಿ ಒಂದು ಅವಿವೇಕದ ವಿಜ್ಞಾನ, ಇಲ್ಲಿ ಯಾವುದಕ್ಕೂ ಸರಿಯಾದ ಚಿಕಿತ್ಸೆ ಇಲ್ಲ, ಅಲೋಪತಿ ಔಷಧಿಗಳನ್ನು ಪಡೆದ ನಂತರವೂ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ರಾಮ್‌ದೇವ್ ತಮ್ಮ ಹೇಳಿಕೆಯನ್ನು ಈಗ ವಾಪಸ್ ಪಡೆದುಕೊಂಡಿದ್ದಾರೆ.
ಬಾಬಾ ರಾಮದೇವ್ ಈ ರೀತಿಯ ಹೇಳಿಕೆ ನೀಡಿದ ಬೆನ್ನಲೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ರಾಮ್‌ದೇವ್ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ದೆಹಲಿ ವೈದ್ಯಕೀಯ ಸಂಘವು (ಡಿಎಂಎ) ದೆಹಲಿಯ ದರಿಯಾಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ವಿವಾದದ ಹಿನ್ನೆಲೆಯಲ್ಲಿ ರಾಮ್‌ದೇವ್ ಅವರಿಗೆ ಪತ್ರ ಬರೆದಿದ್ದ ಆರೋಗ್ಯ ಸಚಿವ ಹರ್ಷವರ್ಧನ್ ‘ನಿಮ್ಮ ಹೇಳಿಕೆಯು ಕೊರೊನಾ ವಾರಿಯರ್‌ಗಳನ್ನು ಅಪಮಾನಿಸುತ್ತಿದೆ. ದೇಶದ ಜನರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಅಲೋಪತಿ ಕುರಿತ ನಿಮ್ಮ ಹೇಳಿಕೆಯು ಆರೋಗ್ಯ ಕಾರ್ಯಕರ್ತರ ಆತ್ಮಸ್ಥೈರ್ಯಕ್ಕೆ ಧಕ್ಕೆ ತರುತ್ತಿದೆ. ಕೋವಿಡ್ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತಿದೆ,’ ಎಂದು ಬೇಸರ ವ್ಯಕ್ತಪಡಿಸಿದರು. ಅಲೋಪತಿ ಕುರಿತ ಹೇಳಿಕೆಯನ್ನು ವಾಪಸ್ ಪಡೆವಂತೆಯೂ ಅವರು ಬಾಬಾ ರಾಮ್‌ದೇವ್‌ಗೆ ಆಗ್ರಹಿಸಿದ್ದರು.
माननीय श्री @drharshvardhan जी आपका पत्र प्राप्त हुआ,
— स्वामी रामदेव (@yogrishiramdev) May 23, 2021
उसके संदर्भ में चिकित्सा पद्दतियों के संघर्ष के इस पूरे विवाद को खेदपूर्वक विराम देते हुए मैं अपना वक्तव्य वापिस लेता हूँ और यह पत्र आपको संप्रेषित कर रहा हूं- pic.twitter.com/jEAr59VtEe
ಆರೋಗ್ಯ ಸಚಿವರ ಪತ್ರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಾಬಾ ರಾಮ್‌ದೇವ್, ‘ಗೌರವಾನ್ವಿತ ಸಚಿವರೇ, ನಾನು ನಿಮ್ಮ ಪತ್ರವನ್ನು ಸ್ವೀಕರಿಸಿದ್ದೇನೆ. ಅಲೋಪತಿ ವೈದ್ಯಕೀಯ ಪದ್ಧತಿ ಕುರಿತ ಹೇಳಿಕೆಯನ್ನು ಹಿಂಪಡೆದುಕೊಳ್ಳುತ್ತೇನೆ’ ಎಂದು ರಾಮ್‌ದೇವ್ ತಿಳಿಸಿದ್ದಾರೆ.
ಈ ಮೂಲಕ ತೀವ್ರ ಟೀಕೆಗಳ ಬಳಿಕ ಅಲೋಪತಿ ಔಷಧಗಳ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಯೋಗ ಗುರು ಬಾಬಾ ರಾಮ್‌ದೇವ್ ಭಾನುವಾರ ರಾತ್ರಿ ಹಿಂಪಡೆದುಕೊಂಡಿದ್ದಾರೆ.