ನವದೆಹಲಿ : ಕಳೆದ ಒಂದೂವರೆ ವರ್ಷದಿಂದ ದೇಶದಲ್ಲಿ ಕೊರೊನಾ ಸಂಕಷ್ಟ ಎದುರಾಗಿದೆ. ಲಾಕ್ಡೌನ್‌ನಿಂದ ಜನರು ತಿನ್ನಲು ಅನ್ನವಿಲ್ಲದೇ ಪರದಾಡುತ್ತಿದ್ದಾರೆ. ಕಳೆದ ವರ್ಷದ ಮೊದಲ ಲಾಕ್ಡೌನ್ ಸಂಕಷ್ಟ ಸುಧಾರಿಸಿಕೊಳ್ಳುವ ಮುನ್ನವೇ ಎರಡನೇ ಬಾರಿ ಮಾಡಿದ ಲಾಕ್ಡೌನ್ ದೇಶದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆದರೆ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ಲಾಕ್ಡೌನ್‌ನಿಂದ ಯಾವುದೇ ಸಮಸ್ಯೆ ಆದಂತೆ ಭಾಸವಾಗುತ್ತಿಲ್ಲ. ಕಾರಣ ಕಾಂಗ್ರೆಸ್ ಮತ್ತು ಬಿಜೆಪಿಯ ಬ್ಯಾಂಕ್ ಖಾತೆಯಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಿದ್ದು, ಖಜಾನೆ ಸಂಪೂರ್ಣ ಭರ್ತಿಯಾಗಿದೆ.

2020 ಅಂತ್ಯಕ್ಕೆ ಬಿಜೆಪಿ ಬ್ಯಾಂಕ್ ಬ್ಯಾಲೆನ್ಸ್ 22,53,43,88,237 (2,253 ಕೋಟಿ) ಇದ್ದರೇ, ಕಾಂಗ್ರೆಸ್ ಬ್ಯಾಂಕ್ ಬ್ಯಾಲೆನ್ಸ್ 1,78,59,44,197 (178 ಕೋಟಿ) ಇದೆ. ಬಿಜೆಪಿ, ಕಾಂಗ್ರೆಸ್ ಗಿಂತ 2075 ಕೋಟಿ ಹೆಚ್ಚು ಹಣವನ್ನು ತನ್ನ ಖಾತೆಯಲ್ಲಿ ಈ ವರ್ಷಾಂತ್ಯಕ್ಕೆ ಹೊಂದಿದೆ.

ಭಾರತೀಯ ಜನತಾ ಪಾರ್ಟಿ ಕಳೆದ ಏಳು ವರ್ಷದಿಂದ ಕೇಂದ್ರದಲ್ಲಿ ಮತ್ತು ಬಹುತೇಕ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪರಿಣಾಮ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಬಂದು ಖಜಾನೆ ಸೇರಿದೆ. ಕಾಂಗ್ರೆಸ್‌ಗೆ ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಬಾರದಿರುವುದು ಅಂಕಿ ಅಂಶಗಳಿಂದ ಗೊತ್ತಾಗುತ್ತಿದೆ.
ಅಂದಹಾಗೇ ಈ ಪ್ರಮಾಣದ ಮೊತ್ತ ನಗದು ರೂಪದಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಎನ್ನಲಾಗಿದ್ದು, ಎರಡು ಪಕ್ಷಗಳ ಸ್ಥಿರಾಸ್ತಿ ಮೌಲ್ಯ ಪ್ರತ್ಯೇಕವಾಗಿದ್ದು ಅದು ಬ್ಯಾಂಕ್ ಬ್ಯಾಲೆನ್ಸ್ ಗಿಂತ ದೊಡ್ಡ ಪ್ರಮಾಣದಲ್ಲಿದೆ ಎಂದು ಉನ್ನತ ಮೂಲಗಳ ಹೇಳಿವೆ.