ತೌಕ್ತೆ ಸಂಕಷ್ಟ ತಪ್ಪಿತು ಎನ್ನುವಾಗಲೇ ಯಾಸ್ ಚಂಡಮಾರುತ ಎಂಟ್ರಿ ಕೊಟ್ಟಿದೆ. ಯಾಸ್ ಎಂಬ ಹೆಸರನ್ನು ಒಮಾನ್ ಸರ್ಕಾರ ನೀಡಿದೆ. ಯಾಸ್ ಎಂದರೆ ನಿರಾಶೆ ಎಂದರ್ಥ. ಮುಂಗಾರಿಗೂ ಮಂಚೆಯೇ ತೌಕ್ತೆ ನಂತರ ಅಬ್ಬರಿಸಲು ಯಾಸ್ ರೆಡಿಯಾಗಿದೆ. ಈಗಾಗಲೇ ಪೂರ್ವ ಕರಾವಳಿಯಲ್ಲಿ ಮಳೆ ಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಅಲ್ಲದೆ, ಯಾಸ್ ಚಂಡಮಾರುತದ ಅಬ್ಬರ ತೀವ್ರವಾಗಿರಲಿದೆ ಎಂಬ ಕಾರಣಕ್ಕೆ ಈಗಾಗಲೇ ಎನ್ಡಿಆರ್ಎಫ್, ಕೋಸ್ಟಲ್ ಗಾರ್ಡ್, ಐಎನ್ಎಸ್ ಚಿಲಿಕಾಗೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಸನ್ನದ್ಧರಾಗಿರಲು ಸೂಚಿಸಿದೆ. ಒಡಿಶಾದ ಸುಮಾರು 14 ರಿಂದ 30 ಜಿಲ್ಲೆಗಳ ಮೇಲೆ ಯಾಸ್ ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡಲಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಬಂಗಾಳ ಕೊಲ್ಲಿಯ ಪೂರ್ವ ಮಧ್ಯ ಭಾಗದಲ್ಲಿ ಮತ್ತು ಪಕ್ಕದ ಅಂಡಮಾನ್ ಉತ್ತರದ ಸಮುದ್ರ ಪ್ರದೇಶದಲ್ಲಿ ಅಲ್ಪ ಒತ್ತಡದ ವಾತಾವರಣ ಸೃಷ್ಟಿಯಾಗಿದ್ದು, ಸೋಮವಾರದ ವೇಳೆಗೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಯಾಸ್ ಚಂಡಮಾರುತ ಎಚ್ಚರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಆರೋಗ್ಯ ಸೌಲಭ್ಯಗಳನ್ನು ಶೇಖರಿಸಿಕೊಳ್ಳಲು ಸೂಚಿಸಿದೆ.
ಕರ್ನಾಟಕದ ಮೇಲೂ ಯಾಸ್ ಪ್ರಭಾವ
ಪೂರ್ವ ಕರಾವಳಿ ರಾಜ್ಯಗಳಲ್ಲಿ ಅಬ್ಬರಿಸುವ ಯಾಸ್, ರಾಜ್ಯದ ಮೇಲೂ ಪ್ರಭಾವ ಬೀರಲಿದೆ. ಕರ್ನಾಟಕದಲ್ಲಿ ಇಂದಿನಿಂದ ಮೇ 25ರವರೆಗೆ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆ ಆಗಲಿದೆ. ಬೆಂಗಳೂರು, ರಾಮನಗರ, ಚಾಮರಾಜನಗರ ಜಿಲ್ಲೆ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.