ಆಂಧ್ರಪ್ರದೇಶ : ಆರ್ಯುವೇದಿಕ್ ಔಷಧಿಯಿಂದ ಕೊರೊನಾ ಸೋಂಕು ಗುಣವಾಗಲಿದೆ ಎಂದು ನಂಬಿದ ಜನರು ಅದನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಂ ಗ್ರಾಮದಲ್ಲಿ ನಡೆದಿದೆ.
ಕೃಷ್ಣಪಟ್ಟಂ ಗ್ರಾಮದಲ್ಲಿ ಶಿಕ್ಷಕರೂ ಆಗಿರುವ ವ್ಯಕ್ತಿಯೊಬ್ಬರು, ತಮ್ಮನ್ನು ಆರ್ಯುವೇದ ತಜ್ಞ ಎಂದು ಹೇಳಿಕೊಂಡಿದ್ದರು. ತಾವು ಕೊರೊನಾ ಸೋಂಕಿಗೆ ಗಿಡಮೂಲಿಕೆಯಿಂದ ಔಷಧಿ ತಯಾರಿಸಿದ್ದು, ಕೊರೊನಾದಿಂದ ರೋಗಿ ಎಂತಹದೇ ಪರಿಸ್ಥಿತಿಯಲ್ಲಿದ್ದರು ಗುಣವಾಗಲಿದ್ದಾರೆ ಎಂದು ಹೇಳಿಕೊಂಡಿದ್ದರು.
ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಈ ಔಷಧಿ ಪಡೆದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿಯಾಗುತ್ತಿದೆ ಎನ್ನುವ ವಿಡಿಯೋಗಳನ್ನು ಸೇರಿಸಿ ಹರಿಬಿಡಲಾಗಿತ್ತು. ಇದನ್ನು ನೋಡಿದ ಸುಮಾರು 40 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಕೃಷ್ಣಪಟ್ಟಂ ಗ್ರಾಮಕ್ಕೆ ಆಗಮಿಸಿ ಆರ್ಯುವೇದಿಕ್ ಔಷಧಿ ಪಡೆಯಲು ಹೆಣಗಾಡುತ್ತಿದ್ದರು.

ಈ ಸುದ್ದಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಿಡಮೂಲಿಕೆಯ ಆರ್ಯುವೇದಿಕ್ ಔಷಧಿ ನೀಡುವುದನ್ನು ನಿಲ್ಲಿಸಿದ್ದಾರೆ. ಔಷಧ ಮಾರಾಟ ಮಾಡುತ್ತಿದ್ದ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ನೆಲ್ಲೂರು ಜಿಲ್ಲಾಡಳಿತ ಆರ್ಯುವೇದಿಕ್ ಔಷಧಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ ( ಐಸಿಎಂಆರ್ ) ಗೆ ಪರೀಕ್ಷೆಗೆ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದೊಂದು ಸುಳ್ಳು ಪ್ರಚಾರ ಎನ್ನಲಾಗಿದ್ದು, ಇದಕ್ಕಾಗಿ ಖಾಲಿ ಬೆಡ್‌ಗಳಿರುವ ಚೆನೈ ಆಸ್ಪತ್ರೆಯ ವಿಡಿಯೋಗಳನ್ನು ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೇ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.