ಬೆಂಗಳೂರು : ಒಂದು ಕಡೆ ಕೊರೊನಾ ವೈರಸ್ ಇಡೀ ದೇಶವನ್ನು ಬಾಧಿಸುತ್ತಿದ್ದರೇ ಮತ್ತೊಂದು ಕಡೆ ಕೊರೊನಾ ಸಂಕಷ್ಟವನ್ನೇ ಕೆಲವರು ದಂಧೆಯಾಗಿಸಿಕೊಂಡಿದ್ದಾರೆ. ನೀವೂ ಇಷ್ಟು ದಿನ ಆಕ್ಸಿಜನ್, ರೆಮ್ಡೆಸಿವಿರ್ ಬ್ಲಾಕ್ ನಲ್ಲಿ ಮಾರಾಟ ಮಾಡುವುದನ್ನು ನೋಡಿದ್ರಿ, ಆದರೆ ಇದೇ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವ್ಯಾಕ್ಸಿನ್ ಕೂಡಾ ಬ್ಲಾಕ್ ಮಾರ್ಕೇಟ್‌ನಲ್ಲಿ ಮಾರಾಟವಾಗುತ್ತಿರುವುದು ಪತ್ತೆಯಾಗಿದೆ.
ನಿನ್ನೆ ವಿಶೇಷ ಕಾರ್ಯಚರಣೆ ನಡೆಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಪೊಲೀಸರು, ಕಾಳಸಂತೆಯಲ್ಲಿ ವ್ಯಾಕ್ಸಿನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಡಾ, ಪುಷ್ಪಿತಾ (25) ಹಾಗೂ ಪ್ರೇಮಾಲತಾ (34) ಹೆಸರಿನ ಇಬ್ಬರು ಆರೋಪಿಗಳು ಸದ್ಯ ಪೊಲೀಸರ ಪಾಲಾಗಿದ್ದಾರೆ.

ಇಡೀ ರಾಜ್ಯದಲ್ಲಿ ವ್ಯಾಕ್ಸಿನ್ ಸಿಗದೇ ಜನರು ಪರದಾಡುತ್ತಿದ್ದಾರೆ. ಸರ್ಕಾರ ಕಷ್ಟಪಟ್ಟು ಹೊಂದಿಸಿ ಜನರಿಗೆ ಲಸಿಕೆ ನೀಡುತ್ತಿದ್ದರೇ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಈ ಕಿಲಾಡಿ ಲೇಡಿಗಳು ವ್ಯಾಕ್ಸಿನ್ ಕದ್ದು ಮಾರುವುದನ್ನೆ ಬ್ಯುಸಿನೆಸ್ ಮಾಡಿಕೊಂಡಿದ್ದರು. ಇವರ ಮೇಲೆ ಅನುಮಾನ ಬಂದ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ವಿಶೇಷ ಕಾರ್ಯಚರಣೆ ನಡೆದಿದ್ದೇಗೆ.?
ಡಾ.ಪುಷ್ಷಿತಾ ಆಸ್ಪತ್ರೆಗೆ ಬರ್ತಿದ್ದ ವ್ಯಾಕ್ಸಿನ್ ಅನ್ನು ಕದ್ದು ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ಪ್ರೇಮಾಲತಾ ಮನೆಯಲ್ಲಿ ರವಾನಿಸುತ್ತಿದ್ದಳು. ಅಲ್ಲಿಂದ ಪ್ರೇಮಾಲತಾ ಮತ್ತು ಪುಷ್ಷಿತಾ ಒಟ್ಟಾಗಿ ಪರಿಚಯಸ್ಥರಿಗೆ ವ್ಯಾಕ್ಸಿನ್ ನೀಡುತ್ತಿದ್ದರು. ಪ್ರತಿ ದಿನ ಐಟಿಐ ಲೇಔಟ್‌ನಲ್ಲಿರುವ ಪ್ರೇಮಾಲತಾ ಮನೆಗೆ ಬರುತ್ತಿದ್ದ ಜನರು ಎಡಗೈ ತೊಳು ಹಿಡಿದುಕೊಂಡು ಮನೆಯಿಂದ ಆಚೆ ಬರುತ್ತಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯರ ಪೊಲೀಸರ ಠಾಣೆಗೆ ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿದರು. ಖುದ್ದು ಇನ್ಸ್‌ಪೆಕ್ಟರ್ ಲೋಹಿತ್ ಲಸಿಕೆ ಪಡೆಯೋ ಸೋಗಿನಲ್ಲಿ ಪ್ರೇಮಾ ಮನೆ ಪ್ರವೇಶ ಮಾಡಿದ್ದರು. ಹಣ ಕೊಟ್ಟು ಲಸಿಕೆ ಪಡೆಯಲು ಸಾಲಿನಲ್ಲಿ ನಿಂತಿದ್ದರು. ಕೊನೆಗೆ ಹಣವನ್ನು ಕೊಟ್ಟು ರೆಡ್ ಹ್ಯಾಂಡ್ ಆಗಿ ಡಾ.ಪುಷ್ಪಿತಾ ಮತ್ತು ಪ್ರೇಮಾಲತಾರನ್ನು ಇನ್ಸ್‌ಪೆಕ್ಟರ್ ಲೋಹಿತ್ ಬಂಧಿಸಿದ್ದರು.
ಡಾ.ಪುಷ್ಪಿತಾ ಯಾರು.?
ಡಾ.ಪುಷ್ಪಿತಾ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ, ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ ಸ್ಕೀಂ ಅಡಿ ಕಳೆದ ಆರು ತಿಂಗಳ ಹಿಂದೆಯಷ್ಟೇ ನೇಮಕವಾಗಿದ್ದರು. ಈ ಪ್ರೇಮಾಲತಾ, ಡಾ.ಪುಷ್ಪಿತಾ ಸ್ನೇಹಿತೆ ಎನ್ನಲಾಗಿದೆ.

ವ್ಯಾಕ್ಸಿನ್ ದಂಧೆ ನಡೆಯುತ್ತಿದ್ದೇಗೆ.?
ಮಂಜುನಾಥ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರ್ತಿದ್ದ ವ್ಯಾಕ್ಸಿನ್ ಪೈಕಿ ನಿತ್ಯ ಐದು ವಯಲ್ ಗಳಷ್ಟು ಲಸಿಕೆಯನ್ನು ಕದ್ದು ಪ್ರೇಮಾಲತಾ ನಿವಾಸಕ್ಕೆ ಡಾ.ಪುಷ್ಪಿತಾ ರವಾನಿಸುತ್ತಿದ್ದಳು. ಆಸ್ಪತ್ರೆಯ ಕರ್ತವ್ಯ ಬಳಿಕ ಐಟಿಐ ಲೇಔಟ್‌ವೊಂದರ ಮನೆಯಲ್ಲಿ ವ್ಯಾಕ್ಸಿನ್ ನೀಡುವ ಕಾರ್ಯ ಮಾಡುತ್ತಿದ್ದರು. ಫೋನ್ ಮೂಲಕವೇ ಈ ಡೀಲ್ ನಡೆಯುತ್ತಿದ್ದು ಪರಿಚಯಸ್ಥರ ಮೂಲಕ ವ್ಯಾಕ್ಸಿನ್ ಗಿರಾಕಿಗಳನ್ನು ಹುಡುಕಿಕೊಳ್ಳುತ್ತಿದ್ದರು. ಹೀಗೆ ಕದ್ದು ವ್ಯಾಕ್ಸಿನ್ ಪಡೆಯಲು ಬರುತ್ತಿದ್ದ ಜನರಿಂದ 500 ರಿಂದ 5000 ವರೆಗೂ ಪಡೆದು ವ್ಯಾಕ್ಸಿನ್ ನೀಡಲಾಗಿದೆ.
ಹೀಗೆ ಮನೆಯಲ್ಲಿ ವ್ಯಾಕ್ಸಿನ್ ಕೊಡುತ್ತಿದ್ದ ಜನರ ಮಾಹಿತಿಯನ್ನು ಮರು ದಿನದ ಆಸ್ಪತ್ರೆಯಲ್ಲಿ ರಿಜಿಸ್ಟರ್ ಮಾಡುವ ಮೂಲಕ ಲಸಿಕೆಯನ್ನು ಅಧಿಕೃತ ಹಂಚಿಕೆ ರೀತಿಯಲ್ಲಿ ಲೆಕ್ಕ ತೋರಿಸುತ್ತಿದ್ದರು. ಕಳೆದ 25 ದಿನಗಳಿಂದ ಈ ಡೀಲ್ ನಡೆಯುತ್ತಿದ್ದು ನಿತ್ಯ 20-30 ಸಾವಿರ ರೂ. ಹಣ ಅಕ್ರಮವಾಗಿ ಈ ಇಬ್ಬರು ಗಳಿಸುತ್ತಿದ್ದರು. ಸದ್ಯ ಈ ಕಿಲಾಡಿ ಲೇಡಿಗಳನ್ನು ಬಂಧಿಸಿರುವ ಪೊಲೀಸರ ಮತ್ತಷ್ಟು ವಿಚಾರಣೆ ಒಳಪಡಿಸಿದ್ದಾರೆ.