ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಪರೀಕ್ಷೆ ನಡೆಸುವ ಲ್ಯಾಬ್‌ಗಳ ಮೇಲೂ ಒತ್ತಡ ಹೆಚ್ಚಾಗಿದೆ. ಈ ಒತ್ತಡ ಕಡಿಮೆ ಮಾಡುವ ಸಲುವಾಗಿ, ಸುಲಭವಾಗಿ ಕೊರೊನಾ ಪತ್ತೆ ಹಚ್ಚುವ ಕೋವಿಸೆಲ್ಫ್ ಹೆಸರಿನ ಹೋಂ ಟೆಸ್ಟ್ ಕಿಟ್ ಈಗ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.

ಮೈ ಲ್ಯಾಬ್ ಸಲ್ಯೂಷನ್ಸ್ ಸಂಸ್ಥೆ ದೇಶದ ಮೊದಲ ಕೊರೊನಾ ಹೋಂ ಟೆಸ್ಟ್ ಕಿಟ್ ತಯಾರಿಸಿದ್ದು, ಪ್ರಗ್ನೇಸಿ ಅಥಾವ ಶುಗರ್ ಟೆಸ್ಟ್ ರೀತಿಯಲ್ಲಿ ಮನೆಯಲ್ಲಿ ಕೂತು ಕೊರೊನಾ ಸೋಂಕು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಮೈ ಲ್ಯಾಬ್ ಅಭಿವೃದ್ಧಿ ಪಡಿಸಿರುವ ಈ ಸಾಧನಕ್ಕೆ ಈಗ ಐಸಿಎಂಆರ್ ಕೂಡಾ ಮಾನ್ಯತೆ ನೀಡಿದ್ದು ಜನರ ಬಳಕೆಗೆ ಸೂಕ್ತವಾಗಿದೆ ಎಂದು ಹೇಳಿದೆ.
ಕೋವಿಸೆಲ್ಫ್ ಮೂಬೈಲ್ ಆ್ಯಪ್ ಆಧರಿತ ಟೆಸ್ಟಿಂಗ್ ಕಿಟ್ ಆಗಿದ್ದು ಇದನ್ನು ಬಳಕೆ ಬಳಿಕ ಇದರ ವರದಿಯನ್ನು ಪೊಟೊ ಕ್ಲಿಕ್ಕಿಸಿ ಆ್ಯಪ್ ಮೂಲಕ ಅಪ್ಲೋಡ್ ಮಾಡಬೇಕಿದೆ. ಈ ಮಾಹಿತಿಯನ್ನು ಐಸಿಎಂಆರ್ ಪರಿಶೀಲಿಸಲಿದ್ದು ನಿಮ್ಮ ಮೇಲೆ ನಿಗಾ ಇಡಲಿದೆ.
ಇದರ ಬಳಕೆಗೆ ಕೆಲವು ಮಾರ್ಗಸೂಚಿಗಳನ್ನು ಐಸಿಎಂಆರ್ ಬಿಡುಗಡೆ ಮಾಡಿದ್ದು, ರೋಗ ಲಕ್ಷಣವುಳ್ಳವರು ಮತ್ತು ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಜನರು ಮಾತ್ರ ಕೋವಿಸೆಲ್ಫ್ RAT ಮನೆ ಪರೀಕ್ಷೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದೆ.
ಈ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಲ್ಲಿ ಬದಲಿ ಪರೀಕ್ಷೆಗಳ ಅಗತ್ಯ ಇಲ್ಲ. ಒಂದು ವೇಳೆ ವರದಿ ನೆಗೆಟಿವ್ ಆದಲ್ಲಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಐಸಿಎಂಆರ್ ಹೇಳಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕವೂ ನಿಮ್ಮನ್ನು ಶಂಕಿತ ಸೋಂಕಿತರು ಎಂದು ಐಸಿಎಂಆರ್ ಪರಿಗಣಿಸಲಿದೆ. ನಿಮ್ಮ ಹೋಂ ಟೆಸ್ಟ್ ರಿಪೊರ್ಟ್‌ಗಳೆಲ್ಲ ಆ್ಯಪ್ ಮೂಲಕ ಪಡೆದುಕೊಳ್ಳಲಿದ್ದು ನಿಮ್ಮ ಮೇಲೆ ನಿಗಾ ವಹಿಸುವ ಕಾರ್ಯ ಕೂಡಾ ಮಾಡಲಿದೆ.