ಪಾಟ್ನಾ : ಕೊರೊನಾ ವೈರಸ್ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗುತ್ತಿದ್ದು ಈ ನಡುವೆ ಬಿಹಾರದ ಪಾಟ್ನಾದಲ್ಲಿ ನಾಲ್ವರಲ್ಲಿ ವೈಟ್ ಫಂಗಸ್ ಸೋಂಕು ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ಹೊಸ ಆತಂಕ ಸೃಷಿಯಾಗಿದೆ.
ಪಾಟ್ನಾದ ಪ್ರಸಿದ್ಧ ವೈದ್ಯ ಸೇರಿ ಒಟ್ಟು ನಾಲ್ಕು ಮಂದಿಯಲ್ಲಿ ಬಿಳಿ ಶೀಲಿಂಧ್ರ ಪತ್ತೆಯಾಗಿದ್ದು ಇದು ಕಪ್ಪು ಶಿಲೀಂಧ್ರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಳಿ ಶಿಲೀಂಧ್ರವು ಕೊರೊನಾ ಸೋಂಕಿನ ರೀತಿಯಲ್ಲಿ ಶ್ವಾಸಕೋಶಕ್ಕೂ ತಗುಲಿರುವುದು ಎಚ್‌ಆರ್‌ಸಿಟಿ ನಡೆಸಿದಾಗ ಪತ್ತೆಯಾಗಿದೆ. ಬಿಳಿ ಶಿಲೀಂಧ್ರದಿಂದ ಸೋಂಕಿತ ನಾಲ್ವರನ್ನು ಪರೀಕ್ಷಿಸಿದಾಗ ಕರೋನವೈರಸ್ ಮಾದರಿಯ ಲಕ್ಷಣಗಳನ್ನು ಕಂಡು ಬಂದಿದೆ. ಅವರ ಶ್ವಾಸಕೋಶವು ಸೋಂಕಿಗೆ ಒಳಗಾಗಿದೆ ಮತ್ತು ಪರೀಕ್ಷೆಗಳ ನಂತರ ಅವರಿಗೆ ಬಿಳಿ ಶಿಲೀಂಧ್ರ ಇರುವುದು ಧೃಡಪಟ್ಟಿದೆ ಎಂದು ಪಿಎಂಸಿಎಚ್‌ನ ಮೈಕ್ರೋಬಯಾಲಜಿ ಮುಖ್ಯಸ್ಥ ಡಾ.ಎಸ್. ಎನ್ ಸಿಂಗ್ ಹೇಳಿದ್ದಾರೆ.
ಸದ್ಯ ಈ ನಾಲ್ವರು ರೋಗಿಗಳು ಚೇತರಿಸಿಕೊಳ್ಳುತ್ತಿದ್ದು ಯಾವುದೇ ತೊಂದರೆಗಳಿಲ್ಲ ಎಂದು ಡಾ.ಎಸ್. ಎನ್ ಸಿಂಗ್ ಹೇಳಿದ್ದಾರೆ. ಆದರೆ ವೈಟ್ ಫಂಗಸ್ ರೋಗ ನಿರೋಧಕ ಶಕ್ತ ಕಡಿಮೆ ಇರುವ ಮತ್ತು ಮಧುಮೇಹಿಗಳನ್ನು ಹೆಚ್ಚು ಬಾಧಿಸಬಹುದು ಎಂದು ಎಚ್ಚರಿಸಿದ್ದಾರೆ.
ವೈಟ್ ಫಂಗಸ್ ಶ್ವಾಸಕೋಶದ ಜೊತೆಗೆ ಉಗುರುಗಳು, ಚರ್ಮ, ಹೊಟ್ಟೆ, ಮೂತ್ರಪಿಂಡ, ಮೆದುಳು, ಖಾಸಗಿ ಭಾಗಗಳು, ಬಾಯಿಗೂ ಹರಡುವ ಸಾಧ್ಯತೆಗಳಿದೆ ಎಂದು ಪಾಟ್ನಾ ಪಿಎಂಸಿಎಚ್‌ನ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ಸಿನ್ಹಾ ಎಚ್ಚರಿಕೆ ನೀಡಿದ್ದಾರೆ.