ನವದೆಹಲಿ : ಯೂಥ್ ಕಾಂಗ್ರೆಸ್ ಕಚೇರಿ ಮೇಲೆ ನಡೆದ ದಾಳಿ ಸಂಬಂಧ ಚರ್ಚಿಸಲು ಕರೆ ಮಾಡಿದ ಸಂಧರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಸಂಸದ ರಾಹುಲ್ ಗಾಂಧಿ ಮುಂದೆ IYC ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅಸಹಾಯಕತೆಯಿಂದ ಕಣ್ಣಿರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ ಕರೆ ಮಾಡಿದ ಸಂಧರ್ಭದಲ್ಲಿ ಭಾವುಕರಾದ ಶ್ರೀನಿವಾಸ್, ದೆಹಲಿ ಪೊಲೀಸರ ಕಿರುಕುಳದ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ. ಯೂಥ್ ಕಾಂಗ್ರೆಸ್ ಮೂಲಗಳ ಪ್ರಕಾರ, ಶ್ರೀನಿವಾಸ್ ತಮ್ಮನ್ನು ಹಿಂಸಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ವಿಚಾರಣೆ ಹೆಸರಿನಲ್ಲಿ ಸರ್ಕಾರದಿಂದ ಕಿರುಕುಳ ನೀಡಲಾಗುತ್ತಿದೆ ಆದರೆ ನಾನು ಇದ್ಯಾವುದಕ್ಕೆ ಹೆದರುವುದಿಲ್ಲ, ನಾನು ಇದಕ್ಕೆಲ್ಲ ಸಂಪೂರ್ಣ ಸಿದ್ದವಾಗಿದ್ದೇನೆ. ನಾನು ಜೈಲಿಗೆ ಹೋಗಲು ಸಿದ್ದ ಆದರೆ ನಮ್ಮ ಉದ್ದೇಶವನ್ನು ಹಾಳು ಮಾಡಲು ಸರ್ಕಾರಕ್ಕೆ ಬಿಡುವುದಿಲ್ಲ ಎಂದು ರಾಹುಲ್ ಗಾಂಧಿಗೆ ಶ್ರೀನಿವಾಸ್ ಹೇಳಿದ್ದಾರೆ ಎನ್ನಲಾಗಿದೆ.
ನಾನು ನಿಮಗಾಗಿ ಸಾಯಲು ಸಿದ್ಧ ಅದಕ್ಕಾಗಿ ನಾನು ಹೋರಾಟ ಮಾಡುತ್ತಲೆ ಇರುತ್ತೇನೆ, ನೀವೂ ನನ್ನ ಜೊತೆಗೆ ನಿಲ್ಲಿ ಎಂದು ಶ್ರೀನಿವಾಸ್ ರಾಹುಲ್ ಗಾಂಧಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀನಿವಾಸ್ ಜೊತೆಗಿನ ಸಂಭಾಷಣೆ ಬಳಿಕ ರಾಹುಲ್ ಗಾಂಧಿ ಪಕ್ಷದ ಇತರೆ ಹಿರಿಯ ನಾಯಕರ ಜೊತೆಗೆ ಚರ್ಚಿಸಿದ್ದು ಎಲ್ಲರೂ ಶ್ರೀನಿವಾಸ್ ಪರವಾಗಿ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೊರೊನಾ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಕ್ಸಿಜನ್, ರೆಮ್ಡೆಸಿವಿರ್, ಬೆಡ್‌ಗಳನ್ನು ಒದಗಿಸುವ ಮೂಲಕ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ನೆರವು ನೀಡುವ ಕೆಲಸ ಮಾಡುತ್ತಿದ್ದರು. ಆಕ್ಸಿಜನ್ ರೆಮ್ಡೆಸಿವಿರ್ ಹಂಚಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ದೆಹಲಿ ಪೊಲೀಸರು ಯೂಥ್ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿ ಶ್ರೀನಿವಾಸ್ ಅವರನ್ನು ವಿಚಾರಣೆ ನಡೆಸಿದ್ದರು.

ಬಿ.ವಿ ಶ್ರೀನಿವಾಸ್ ಶಿವಮೊಗ್ಗದ ಭದ್ರಾವತಿ ಮೂಲದವರು, ಸದ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅವರು, ಕೊರೊನಾ ಸಂಧರ್ಭದಲ್ಲಿ ವಾರ್ ರೂಂ ನಿರ್ಮಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ.