ಬೆಂಗಳೂರು : ಅರಬ್ಬೀ ಸಮುದ್ರದ ಲಕ್ಷದ್ವೀಪ ಕೇಂದ್ರಿಕರಿಸಿದ್ದ ತೌಕ್ತೆ ಚಂಡಮಾರುತ ಭಾರತಕ್ಕೆ ಅಪ್ಪಳಿಸಿದೆ. ಮುಂದಿನ 12 ಗಂಟೆಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳಲಿದ್ದು, ಮಂಗಳವಾರ ಬೆಳಿಗ್ಗೆ ಭಾವನಗರ ಜಿಲ್ಲೆಯ ಪೊರ್ಬಂದರ್ ಮತ್ತು ಮಾಹುವಾ ಮೂಲಕ ಗುಜರಾತ್ ಕರಾವಳಿಯನ್ನು ದಾಟಬಹುದು ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತವು ಗುಜರಾತ್ ಕರಾವಳಿಯತ್ತ ಸಾಗುತ್ತಿದ್ದರೂ, ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಮೇಲೆ ಇದರ ಪರಿಣಾಮ ಉಂಟಾಗಲಿದ್ದು ನಿರಂತರ ಮಳೆ ಜೊತೆಗೆ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಲಿದೆ.
ಕೇರಳದ ಮೂರು ಜಿಲ್ಲೆಗಳಾದ ಮಲಪ್ಪುರಂ, ಎರ್ನಾಕುಲಂ ಮತ್ತು ಇಡುಕ್ಕಿಗಳಲ್ಲಿ ಆರೆಂಜ್ ಎಚ್ಚರಿಕೆ ನೀಡಿದ್ದು ಇತರ ಎಲ್ಲ ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ. ಅರೇಬಿಯನ್ ಸಮುದ್ರದಲ್ಲಿ ತೌಕ್ತೆ ಉತ್ತರಕ್ಕೆ ಚಲಿಸುವಾಗಲೂ ಕೇರಳದ ಮೇಲೆ ಪ್ರತ್ಯೇಕ ಪರಿಣಾಮ ಬೀರದಲಿದ್ದು ಭಾರೀ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ಮುಂಬರುವ ಕೆಲವು ಗಂಟೆಗಳು ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.
ಮುಂದಿನ ಸೂಚನೆ ಬರುವವರೆಗೂ ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಮುಂದಿನ 24 ಗಂಟೆಗಳ ಕಾಲ ಕೇರಳ ತೌಕ್ತೆಯ ಪರಿಣಾಮಗಳನ್ನು ಎದುರಿಸಲಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಕೂಡಾ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಆರು ಜಿಲ್ಲೆಗಳಲ್ಲ 73 ಹಳ್ಳಿಗಳ ಮೇಲೆ ತೌಕ್ತೆ ಚಂಡಮಾರುತ ಪರಿಣಾಮ ಬೀರಲಿದೆ. ಮೂರು ಕರಾವಳಿ ಮತ್ತು ಮೂರು ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶಗಳಲ್ಲಿ ಚಂಡಮಾರುತದ ಎಫೆಕ್ಟ್ ಇರಲಿದೆ. ಈಗಾಗಲೇ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿತ್ತಿದ್ದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಗೋವಾ ಮಹಾರಾಷ್ಟ್ರದಲ್ಲೂ ತೌಕ್ತೆ ಚಂಡಮಾರುತ ಅಪಾರ ನಷ್ಟ ಉಂಟು ಮಾಡಲಿದೆ.
ಹವಾಮಾನ ಇಲಾಖೆಯ ಪ್ರಕಾರ, ತೌಕ್ತೆ ಈಶಾನ್ಯ ದಿಕ್ಕಿನಲ್ಲಿ ಒಳನಾಡಿನಲ್ಲಿ ಹಾದು ಹೋದರು ಆದಾಗ್ಯೂ, ಉತ್ತರ ಭಾರತದಾದ್ಯಂತ ಗಣನೀಯ ಪ್ರಮಾಣದ ಮಳೆಯಾಗಲಿದೆ ಎಂದು ಹೇಳಿದೆ. ಗುಜರಾತ್, ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಗುರುವಾರ ತನಕ ಮಳೆಯಾಗಲಿವೆ ಎಂದು ಐಎಂಡಿ ಹೇಳಿದೆ.