ಜೆರುಸಲೆಮ್ : ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ನಡುವೆ ನಡೆಯುತ್ತಿರುವ ಕಾದಾಟ ಸತತ ಏಳನೇ ದಿನದ ಬಳಿಕವೂ ಅಂತ್ಯವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ನಿನ್ನೆ ಗಾಜಾ ಸಿಟಿ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ಮತ್ತಷ್ಟು ದಾಳಿಗಳನ್ನು ನಡೆಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಇಸ್ರೇಲ್ ನಡೆಸುತ್ತಿರುವ ದಾಳಿಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನೆತನ್ಯಾಹು, ನಾವು ಕಾರ್ಯಾಚರಣೆಯ ಮಧ್ಯ ಭಾಗದಲ್ಲಿದ್ದೇವೆ, ಅದು ಇನ್ನೂ ಮುಗಿದಿಲ್ಲ ಮತ್ತು ಈ ಕಾರ್ಯಾಚರಣೆಯು ಅಗತ್ಯವಿರುವವರೆಗೂ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಮೂಲಕ ಗಾಜಾ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ದಾಳಿಗಳು ಮುಂದುವರಿಯುವ ಸುಳಿವು ಸಿಕ್ಕಿದೆ. ಈವರೆಗೂ ಈ ಸಂಘರ್ಷದಲ್ಲಿ 41 ಮಕ್ಕಳು ಸೇರಿದಂತೆ ಕನಿಷ್ಠ 145 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ನಿನ್ನೆಯಷ್ಟೆ ಇಸ್ರೇಲ್ ತನ್ನ ವೈಮಾನಿಕ ದಾಳಿಯಿಂದ ಗಾಜಾ ಸಿಟಿಯಲ್ಲಿನ 12 ಅಂತಸ್ತಿನ ಬ್ಲಾಕ್ ಯುಎಸ್ ಅಸೋಸಿಯೇಟೆಡ್ ಪ್ರೆಸ್ ಮತ್ತು ಕತಾರ್ ಮೂಲದ ಅಲ್ ಜಜೀರಾ ಮಾಧ್ಯಮ ಕಚೇರಿಯನ್ನು ಧ್ವಂಸಗೊಳಿಸಿತ್ತು. ಇಸ್ರೇಲ್ ಮಿಲಿಟರಿ ಇದು ಹಮಾಸ್ ಮಿಲಿಟರಿ ಕಚೇರಿಗಳನ್ನು ಒಳಗೊಂಡಿರುವ ಕಾನೂನುಬದ್ಧ ಮಿಲಿಟರಿ ಗುರಿಯಾಗಿದೆ ಮತ್ತು ದಾಳಿಗೆ ಮುಂಚಿತವಾಗಿ ಕಟ್ಟಡದಿಂದ ಹೊರಬರಲು ನಾಗರಿಕರಿಗೆ ಎಚ್ಚರಿಕೆ ನೀಡಿತ್ತು ಎಂದು ಹೇಳಿದೆ.