ಬೆಂಗಳೂರು : ತೌಕ್ತೆ ಚಂಡಮಾರುತ ಪರಿಣಾಮದಿಂದಾಗಿ ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರಿ ಪ್ರಮಾಣ ಗಾಳಿ ಮಳೆಯಾಗುತ್ತಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಮತ್ತು ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ ಎಂದು ಅದು ತಿಳಿಸಿದೆ.
ಮಲೆನಾಡು ಭಾಗದಲ್ಲಿ ಗಂಟೆಗೆ 70-80 ಕಿಲೋಮೀಟರ್ ವೇಗದಲ್ಲಿ ಗಾಳಿ ಮಳೆಯಾಗುತ್ತಿದ್ದರೇ, ಕರಾವಳಿ ಭಾಗದಲ್ಲಿ ಗಂಟೆಗೆ 90 ಕಿಮೀ ವೇಗದಲ್ಲಿ ಗಾಳಿ ಮಳೆಯಾಗುತ್ತಿದೆ. ಸೈಕ್ಲೋನ್ ಎಫೆಕ್ಟ್‌ನಿಂದ ನಿನ್ನೆ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದೆ.
ನಿನ್ನೆ ಬೆಳಗ್ಗೆ 8:30 ರಿಂದ ಇಂದು ಬೆಳಗ್ಗೆ 8:30 ವರೆಗೂ ರಾಜ್ಯದ 313 ಕೇಂದ್ರಗಳಲ್ಲಿ 64.5 ಮಿಲಿ ಮೀಟರ್ ಮಳೆಯಾಗಿದೆ. ಕುಂದಾಪುರ ತಾಲೂಕಿನ ನಾಡಾ ಕೇಂದ್ರದಲ್ಲಿ 385 ಮಿಮೀ ಮಳೆ ದಾಖಲಾಗಿದ್ದು ರಾಜ್ಯದಲ್ಲೆ ಅತಿ ಹೆಚ್ಚು ಮಳೆ ಪ್ರಮಾಣ ಇಲ್ಲಿ ದಾಖಲಾಗಿದೆ. ಇನ್ನು ಉಡುಪಿಯ 15 ಕೇಂದ್ರಗಳಲ್ಲಿ 200 ಮಿಮೀ ಮಳೆ ದಾಖಲಾಗಿದೆ.
ಭಾರಿ ಪ್ರಮಾಣದ ಗಾಳಿ ಮಳೆಯಿಂದ ಸಮುದ್ರ ಭಾಗದಲ್ಲಿರುವ ರಸ್ತೆಗಳು ಹಾಳಾಗಿದ್ದು ಅನೇಕ ಮನೆಗಳು ಕೊಚ್ಚಿ ಹೋಗಿವೆ. ಮತ್ತಷ್ಟು ನಷ್ಟವನ್ನು ಅಂದಾಜು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.