ಮುಳಬಾಗಿಲು : ಈಗೀನ ಕಾಲದಲ್ಲಿ ಒಂದು ಹುಡುಗಿ ಹುಡುಕಿ ಮದುವೆಯಾಗಿ ನಿಭಾಯಿಸುವುದು ಕಷ್ಟ ಅನ್ನೊ ಮಾತಿದೆ, ಆದರೆ ಇಲ್ಲೊಬ್ಬ ವ್ಯಕ್ತಿ ಏಕಕಾಲದಲ್ಲಿ ಒಂದೇ ಮಂಟಪದಲ್ಲಿ ಇಬ್ಬರು ಹುಡುಗಿಯರನ್ನ ಅದರಲ್ಲೂ ಅಕ್ಕ ತಂಗಿಯನ್ನ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಮುಳಬಾಗಿಲು ತಾಲೂಕು, ಗಡ್ಡೂರು ಗ್ರಾಮ ಪಂಚಾಯತಿಯ ಬಾಗೇಪಲ್ಲಿ ಗ್ರಾಮದ ಉಮಾಪತಿ ಎಂಬುವವರು ಈ ಅಪರೂಪದ ಮದುವೆಯಾಗಿರುವ ವರ. ಮುಳಬಾಗಿಲು ತಾಲೂಕಿನ ತಿಮ್ಮರಾವುತನಹಳ್ಳಿ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಕಳೆದ ಮೇ 7 ರಂದು ಅರತಕ್ಷತೆ ಕಾರ್ಯಕಮವೂ ಕೂಡಾ ಅದ್ದೂರಿಯಾಗಿ ನಡೆದಿದೆ.

ಮುಳಬಾಗಿಲು ತಾಲೂಕು ತಿಮ್ಮರಾವುತನಹಳ್ಳಿ ಪಟ್ಟಣ ಪಂಚಾಯತಿಯ ವೇಗಮಡುಗು ಗ್ರಾಮದ ನಾಗರಾಜಪ್ಪ ಎಂಬುವವರ ದ್ವಿತೀಯ ಸುಪುತ್ರಿ ಸುಪ್ರೀಯ ಮತ್ತು ತೃತೀಯ ಸುಪುತ್ರಿ ಲಲಿತಾ ಎನ್ನುವ ಯುವತಿರನ್ನು ಉಮಾಪತಿ ಮದುವೆಯಾಗಿದ್ದಾರೆ.

ಈ ಮದುವೆಯ ಆಮಂತ್ರಣ ಪತ್ರ ಮತ್ತು ಪೊಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದು, ಹಾಸ್ಯ ಮಾಡುತ್ತಿದ್ದಾರೆ. ಅಲ್ಲದೇ ಬಹಳಷ್ಟು ಜನರ ಟೀಕೆಗೂ ಕೂಡಾ ಈ ಮದುವೆ ಗುರಿಯಾಗಿದೆ.
ಈ ಬಗ್ಗೆ ಮಾಹಿತಿ ಪಡೆಯಲು ಸಂಪರ್ಕಿಸಿದಾಗ ಕುಟುಂಬಸ್ಥರು ಸ್ಪಷ್ಟವಾದ ಮಾಹಿತಿ ನೀಡಿಲ್ಲ, ಬದಲಿಗೆ ಗ್ರಾಮಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದು, ಈ ಇಬ್ಬರು ಯುವತಿಯರ ಪೈಕಿ ಒಬ್ಬರು ಮೂಗಿಯಾಗಿದ್ದು ಕಿವುಡುತನದಿಂದ ಬಳಲುತ್ತಿದ್ದಾರೆ ಮಾನವೀಯತೆ ದೃಷ್ಟಿಯಿಂದ ಈ ಮದುವೆ ನಡೆದಿದೆ ಎಂದು ತಿಳಿದು ಬಂದಿದೆ.
ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಈ ಯುವತಿಯರ ತಂದೆಗೆ ಎರಡು ಮದುವೆಯಾಗಿದ್ದು ರಾಣೆಮ್ಮ ಮತ್ತು ಸುಬ್ಬಮ್ಮ ಹೆಸರಿನ ಪತ್ನಿಯರನ್ನು ಹೊಂದಿದ್ದಾರೆ ಎನ್ನಲಾಗಿದೆ.