ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಸರಿದೂಗಿಸಲು ಮೂರು ಅಂಶಗಳ ಕಾರ್ಯತಂತ್ರವನ್ನು ಸರ್ಕಾರ ರೂಪಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಜನರೇಟರುಗಳ ಮೂಲಕ ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರುಗಳು ಹಾಗೂ ಸಿಲಿಂಡರುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಆಮ್ಲಜನಕ ಹಂಚಿಕೆಯನ್ನು 965 ಮೆಟ್ರಿಕ್ ಟನ್ ನಿಂದ 1015 ಮೆಟ್ರಿಕ್ ಟನ್ ಗೆ ಹೆಚ್ಚಿಸಿದೆ. ಇದರಲ್ಲಿ 765 ಮೆಟ್ರಿಕ್ ಟನ್ ಆಮ್ಲಜನಕವು ರಾಜ್ಯದಲ್ಲಿಯೇ ದೊರೆಯುತ್ತಿದೆ. 60 ಟನ್ ಪಿಎಸ್‍ಎ ಪ್ಲಾಂಟ್‍ಗಳಿಂದ ಹಾಗೂ 160 ಟನ್ ಒಡಿಶಾ ಹಾಗೂ 30 ಟನ್ ವಿಶಾಖಪಟ್ಟಣದಿಂದ ದೊರೆಯುತ್ತಿದೆ. ನಮಗೆ ಹಂಚಿಕೆಯಾಗಿರುವ, ರಾಜ್ಯದೊಳಗೆ ಲಭ್ಯವಿರುವ ಆಮ್ಲಜನಕವನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಇತರ ರಾಜ್ಯಗಳಿಂದ ಆಮ್ಲಜನಕ ಪಡೆಯಲು ಸಹ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ
ಮೇ 11 ರಂದು ನಾವು 1050 ಮೆಟ್ರಿಕ್ ಟನ್ ಹಾಗೂ ಮೇ 12ರಂದು 800 ಮೆಟ್ರಿಕ್ ಟನ್ ಆಮ್ಲಜನಕ ಪಡೆದಿದ್ದೇವೆ. ಬಹರೇನ್ ನಿಂದ 40 ಟನ್ ಹಾಗೂ ಕುವೈಟ್ ನಿಂದ 100 ಟನ್ ಆಮ್ಲಜನಕ ಪಡೆಯಲಾಗಿದೆ. ಜಮ್‍ಷೆಡ್‍ಪುರದಿಂದ ಟ್ರೇನ್ ಮೂಲಕ 120 ಟನ್ ಆಮ್ಲಜನಕ ತರಲಾಗಿದೆ. ರಾಜ್ಯದಲ್ಲಿಯೂ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 127 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಅದರಲ್ಲಿ 62 ಆಮ್ಲಜನಕ ಉತ್ಪಾದನಾ ಘಟಕಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ಸ್ಥಾಪಿಸಲಾಗುತ್ತಿದೆ. 28 ಘಟಕಗಳು ಭಾರತ ಸರ್ಕಾರದಿಂದ ಹಂಚಿಕೆಯಾಗಿವೆ. 24 ಘಟಕಗಳನ್ನು ಎನ್‍ಎಚ್‍ಎಐ ಸ್ಥಾಪಿಸುತ್ತಿದೆ. 11 ಘಟಕಗಳನ್ನು ವಿವಿಧ ಕಂಪೆನಿಗಳ ಸಿಎಸ್‍ಆರ್ ನೆರವಿನಡಿ ಸ್ಥಾಪಿಸಲಾಗುತ್ತಿದೆ. 2 ಘಟಕಗಳನ್ನು ವಿದೇಶಗಳು ಒದಗಿಸಿವೆ.
ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರ ಅನುಕೂಲಕ್ಕಾಗಿ ಓಲಾ ಮತ್ತು ಗಿವ್‍ಇಂಡಿಯಾ ಸಂಸ್ಥೆಯವರು ಒಂದು ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಉಚಿತವಾಗಿ ಎರವಲು ನೀಡಲು ಮುಂದಾಗಿವೆ ಇವುಗಳನ್ನು ಬಳಸಿ ಸಂಚಾರಿ ಆಕ್ಸಿಜನ್ ಸೇವೆ ಒದಗಿಸುವ ಆಕ್ಸಿಬಸ್‍ಗಳಿಗೆ ಚಾಲನೆ ನೀಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳು ಮತ್ತು ಟ್ರಯೇಜ್ ಸೆಂಟರುಗಳ ಬಳಿ ತುರ್ತು ಅಗತ್ಯವಿರುವವರಿಗೆ ನೆರವಾಗುತ್ತಿವೆ ಎಂದು ಸಿಎಂ ತಿಳಿಸಿದರು.
ಇನ್ನು ಜಿಲ್ಲೆಗಳಲ್ಲಿರುವ ಆಮ್ಲಜನಕ ಬೇಡಿಕೆಯ ಒತ್ತಡವನ್ನು ನಿವಾರಿಸಲು 10 ಸಾವಿರದ ವರೆಗೆ ಆಕ್ಸಿಜನ್ ಸಿಲಿಂಡರುಗಳನ್ನು ಪಡೆಯಲು ತೀರ್ಮಾನಿಸಲಾಗಿದೆ. ಕಳೆದ 15-20 ದಿನಗಳಲ್ಲಿ 730 ಆಮ್ಲಜನಕ ಸಿಲಿಂಡರುಗಳನ್ನು ತರಿಸಿದೆ. 380 ಸಿಲಿಂಡರುಗಳನ್ನು ಕೇಂದ್ರ ಸರ್ಕಾರ ಒದಗಿಸಿದ್ದು, 350 ಸಿಲಿಂಡರುಗಳನ್ನು ವಿದೇಶಗಳಿಂದ ಪಡೆಯಲಾಗಿದೆ. ಈ ಸಿಲಿಂಡರುಗಳನ್ನು ಅಗತ್ಯವಿರುವ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಮೂರು ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಈಗಾಗಲೇ ರಾಜ್ಯದೆಲ್ಲೆಡೆ ಹಂಚಿಕೆ ಮಾಡಲಾಗಿದೆ. ಸರ್ಕಾರ ಹಾಗೂ ವಿವಿಧ ಕಂಪೆನಿಗಳ ಸಿಎಸ್‍ಆರ್ ನೆರವಿನೊಂದಿಗೆ ಇನ್ನೂ ಏಳು ಸಾವಿರ ಕಾನ್ಸಂಟ್ರೇಟರ್‍ಗಳನ್ನು ಹಂಚಿಕೆ ಮಾಡಲಿದೆ ಎಂದು ಯಡಿಯೂರಪ್ಪ ತಿಳಿಸಿದರು.