ಬೆಂಗಳೂರು: ಕೊವೀಡ್ ಸೋಂಕಿಗೆ ತುತ್ತಾದವರು ಹೋಮ್ ಐಸೋಲೇಷನ್ ಆದ ಒಂದು ಗಂಟೆಯೊಳಗೇ ಅವರ ಮನೆಗೆ ಮೆಡಿಕಲ್ ಕಿಟ್ ತಲುಪಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಿಟ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ತಕ್ಷಣವೇ 5 ಲಕ್ಷ ಮೆಡಿಕಲ್ ಕಿಟ್‌ಗಳನ್ನು ಖರೀದಿ ಮಾಡಲು ಸರಕಾರ ನಿರ್ಧರಿಸಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕಿಟ್ ಖರೀದಿ ಮಾಡಲಾಗುವುದು ಎಂದರು.

ಮನೆಗಳಲ್ಲಿಯೇ ಕ್ವಾರಂಟೈನ್ ಅಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಈ ಮೆಡಿಕಲ್ ಕಿಟ್‌ನಲ್ಲಿ ರೋಗ ಮತ್ತು ಸೋಂಕು ನಿರೋಧಕ ಔಷಧಗಳು, ವೈರಸ್ ನಿರೋಧಕ, ವಿಟಮಿನ್ ಟ್ಯಾಬ್ಲೆಟ್ ಸೇರಿದಂತೆ ರೋಗ ಉಲ್ಬಣವಾಗುವುದನ್ನು ತಡೆಯುವ ಎಲ್ಲ ಔಷಧಗಳು ಇರಲಿದೆ.
ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾಗಿರುವ ʼಕಾಲ್ಟಿಸಿನ್ʼ ಮಾತ್ರೆಯೂ ಕಿಟ್ ನಲ್ಲಿ ಇರಲಿದ್ದು, 10 ದಿನಕ್ಕೆ ಆಗುವಷ್ಟು ಔಷಧಿಗಳ ಜತೆಗೆ ಟೆಲಿ ಕನ್ಸಲ್‌ಟೆನ್ಸಿ ಸೌಲಭ್ಯವೂ ಇರುತ್ತದೆ ಎಂದು ಡಿಸಿಎಂ ಹೇಳಿದ್ದಾರೆ.