ಬೆಂಗಳೂರು : ರಾಜ್ಯದಲ್ಲಿ ಜಾರಿ ಮಾಡಿರುವ ಕಠಿಣ ನಿಯಮಗಳು ಮತ್ತು ಲಾಕ್ಡೌನ್‌ನಿಂದಾಗಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಇಂದು ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಲಾಕ್ಡೌನ್ ಲಾಭಗಳ ಕುರಿತು ವಿವರಿಸಿದರು.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಏಪ್ರಿಲ್ 24 ರಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಅಲ್ಲದೆ, ಮೇ 10 ರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಯಿತು. ರಾಜ್ಯದಲ್ಲಿ ಮೇ 5 ರಂದು ಗರಿಷ್ಠ 50,112 ಪ್ರಕರಣಗಳು ವರದಿಯಾಗಿದ್ದು, ಈ ಕಠಿಣ ಕ್ರಮಗಳಿಂದಾಗಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ನಿನ್ನೆ 39,900ಕ್ಕೆ ಇಳಿದಿದೆ ಎಂದರು.
ಬೆಂಗಳೂರಿನಲ್ಲಿ ಮೇ 5 ರಂದು 23,106 ಪ್ರಕರಣಗಳಿದ್ದಿದ್ದು, ನಿನ್ನೆಗೆ 16,286 ಸಂಖ್ಯೆಗೆ ಇಳಿಕೆಯಾಗಿದೆ. ಪ್ರಾರಂಭದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರುಗತಿಯಲ್ಲಿದ್ದ ಬೆಂಗಳೂರು, ಬೀದರ್ ಮತ್ತು ಕಲಬುರಗಿಯಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಾಸಿಗೆಗಳ ಹೆಚ್ಚಳ
ಕಳೆದ ವರ್ಷ ಮಾರ್ಚ್‍ನಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್‍ಗಳು, 444 ಐಸಿಯು ಗಳು ಹಾಗೂ 610 ವೆಂಟಿಲೇಟರ್ ಸಹಿತ ಐಸಿಯು ಗಳ ಸೌಲಭ್ಯವಿತ್ತು. ಈ ಎಲ್ಲ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಪ್ರಸ್ತುತ ಇಲಾಖೆಯ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳಲ್ಲಿ 24 ಸಾವಿರ ಆಕ್ಸಿಜನೇಟೆಡ್ ಬೆಡ್‍ಗಳು, 1145 ಐಸಿಯು ಬೆಡ್‍ಗಳು, 2059 ವೆಂಟಿಲೇಟರ್ ಬೆಡ್‍ಗಳು ಹಾಗೂ 1248 ಹೆಚ್‍ಎಫ್‍ಎನ್‍ಸಿ ಸೌಲಭ್ಯಗಳು ಲಭ್ಯವಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, 4700 ರಿಂದ 9405 ಕ್ಕೆ ಹೆಚ್ಚಿಸಲಾಗಿದೆ. ವೆಂಟೆಲೇಟೆಡ್ ಬೆಡ್‍ಗಳ ಸಂಖ್ಯೆಯನ್ನು 341 ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಎಚ್‍ಎಫ್‍ಎನ್‍ಸಿಗಳ ಸಂಖ್ಯೆಯನ್ನು 15 ರಿಂದ 570ಕ್ಕೆ ಹೆಚ್ಚಿಸಲಾಗಿದೆ ಎಂದರು.
ಆಸ್ಪತ್ರೆಗಳ ಮೂಲಸೌಕರ್ಯ ಬಲಪಡಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ಹೆಚ್ಚುವರಿ ವೆಂಟೆಲೇಟರುಗಳು ಮತ್ತಿತರ ಸೌಲಭ್ಯಗಳು ನಿರಂತರವಾಗಿ ಸೇರ್ಪಡೆಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಸುಮಾರು 200 ವೆಂಟಿಲೇಟರುಗಳನ್ನು ನೀಡಿದ್ದೇವೆ. ಖಾಸಗಿ ವೈದ್ಯಕೀಯ ಕಾಲೇಜುಗಳು ಆಕ್ಸಿಜನ್ ಬೆಡ್‍ಗಳನ್ನು ಹೆಚ್ಚಿಸಲು ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡುತ್ತಿದ್ದೇವೆ. ಇಂತಹ ಆಸ್ಪತ್ರೆಗಳಿಗೆ ಸರ್ಕಾರ ಶೇ. 70ರ ಸಹಾಯ ಧನ ನೀಡಲಿದ್ದು, ಉಳಿದ ಶೇ. 30ರ ಮೊತ್ತವನ್ನು ಆಯಾ ಆಸ್ಪತ್ರೆಗಳು ಭರಿಸಬೇಕು ಎಂದು ತಿಳಿಸಿದರು.