ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ತೀವ್ರ ಅಭಾವದ ಹಿನ್ನಲೆಯಲ್ಲಿ ಮೂರನೇ ಹಂತದ ವ್ಯಾಕ್ಸಿನ್ ಅಭಿಯಾನಕ್ಕೆ ತಾತ್ಕಾಲಿಕ ತಡೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನಾಳೆಯಿಂದ ರಾಜ್ಯದಲ್ಲಿ 18 ರಿಂದ 45 ವರ್ಷದವರಿಗೆ ಲಸಿಕೆ ಲಭ್ಯವಾಗುವುದಿಲ್ಲ.
ಇಂದು ನಡೆದ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಚಿವರ ಸಚಿವರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಾಳೆ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟವಾಗುವ ನಿರೀಕ್ಷೆಗಳಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ವ್ಯಾಕ್ಸಿನ್ ಅಭಾವ ತೀವ್ರವಾಗಿತ್ತು ಬೆಂಗಳೂರು ನಗರದಲ್ಲಿ ಇಂದು 40,000 ಡೋಸ್‌ಗಳು ಮಾತ್ರ ಬಾಕಿ ಉಳಿದಿತ್ತು. ಇನ್ನು ಜಿಲ್ಲಾ ಪ್ರದೇಶಗಳಲ್ಲೂ ವ್ಯಾಕ್ಸಿನ್ ಕೊರತೆ ಹಿನ್ನಲೆ ಸಾಕಷ್ಟು ತೊಂದರೆಗಳಾಗುತ್ತಿದೆ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ನಿರೀಕ್ಷಿತ ಪ್ರಮಾಣದ ವ್ಯಾಕ್ಸಿನ್ ಬಾರದಿರುವುದು ಈ ಸಮಸ್ಯೆ ಕಾರಣ ಎನ್ನಲಾಗಿದೆ.
ಸದ್ಯ ವ್ಯಾಕ್ಸಿನ್ ಪ್ರಮಾಣ ಕಡಿಮೆ ಇರುವ ಹಿನ್ನಲೆ 18+ ವಯಸ್ಸಿನವರಿಗೆ ವ್ಯಾಕ್ಸಿನ್ ಮೊದಲ ಡೋಸ್ ನೀಡಿದ್ದಲ್ಲಿ ಎರಡನೇ ಡೋಸ್ ಪಡೆಯುವ ಜನರಿಗೆ ಕೊರತೆ ಸೃಷ್ಟಿಯಾಗುತ್ತಿದ್ದು, ಕಡ್ಡಾಯವಾಗಿ ಎರಡನೇ ಡೋಸ್ ನೀಡಬೇಕಿರುವ ಕಾರಣ ಮೊದಲ ಡೋಸ್ ನೀಡುವ ಪ್ರಕ್ರಿಯೆಗೆ ಸರ್ಕಾರ ತಡೆ ನೀಡಲು ನಿರ್ಧರಿಸಿದೆ.
ಇತ್ತಿಚೆಗೆ ಕೇಂದ್ರ ಸರ್ಕಾರ ಮುಂದಿನ 15 ದಿನಗಳ ಕಾಲ 18+ ವಯಸ್ಸಿನವರಿಗೆ ವ್ಯಾಕ್ಸಿನ್ ನೀಡುವುದನ್ನು ನಿಲ್ಲಿಸಿ 45+ ವಯಸ್ಸಿನ ಜನರಿಗೆ ಎರಡನೇ ಡೋಸ್ ನೀಡುವಂತೆ ಸೂಚನೆ ನೀಡಿತ್ತು. ಈ ಹಿನ್ನಲೆ ರಾಜ್ಯ ಸರ್ಕಾರ ಮೂರನೇ ಹಂತದ ವ್ಯಾಕ್ಸಿನೇಷನ್ ಅಭಿಯಾನಕ್ಕೆ ತಡೆ ನೀಡಿದೆ. ಆದರೆ ಈಗಾಗಲೇ 18+ ವಯಸ್ಸಿನವರು ಮೊದಲ ಡೋಸ್ ವ್ಯಾಕ್ಸಿನ್ ಪಡೆದಲ್ಲಿ ಎರಡನೇ ಡೋಸ್ ನೀಡಲು ಅವಕಾಶ ಕಲ್ಪಿಸಿದೆ.